ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭದ್ರತೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ಕುರಿತು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತನಿಖೆ ನಡೆಸಲಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಗಮನಕ್ಕೆ ಬಂದಿದೆ ಎಂದೂ ರಾಜ್ಯಪಾಲರು ತಿಳಿಸಿದ್ದಾರೆ.
ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮುಖ್ಯಮಂತ್ರಿ ನಿರಪರಾಧಿ ಆಗಿದ್ದರೆ ಅವರಿಗೇಕೆ ಭಯ ಎಂದು ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಪ್ರಶ್ನಿಸಿದರು. ಪ್ರಕರಣದ ನಿಗೂಢತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಮುಖ್ಯಮಂತ್ರಿ ಹಾಗೂ ಸರ್ಕಾರದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕೇರಳದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯೂ ಇಷ್ಟೊಂದು ಭದ್ರತೆಯೊಂದಿಗೆ ಪ್ರಯಾಣಿಸಿಲ್ಲ ಎಂದು ಸತೀಶನ್ ಪ್ರತಿಪಾದಿಸಿದ್ದಾರೆ. ಸಿಎಂ ಭದ್ರತಾ ವ್ಯವಸ್ಥೆ ಬೆಚ್ಚಿ ಬೀಳಿಸುವಂತಿದೆ. ಮುಖ್ಯಮಂತ್ರಿ ಜತೆ 40 ವಾಹನಗಳು ಬಂದಿದ್ದವು. ಪೋಲೀಸರು 20 ಮೀಟರ್ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ರಾಜ್ಯದ ಸಂಪೂರ್ಣ ಪೋಲೀಸರನ್ನು ಭದ್ರತೆಗೆ ನಿಯೋಜಿಸಿ ಮುಖ್ಯಮಂತ್ರಿಗೆ ಭದ್ರತೆ ಒದಗಿಸಲಾಗುತ್ತಿದೆ ಎಂದು ಸತೀಶನ್ ಆರೋಪಿಸಿದ್ದಾರೆ.