ನವದೆಹಲಿ: ನೀತಿ ಆಯೋಗದ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಪರಮೇಶ್ವರನ್ ಅಯ್ಯರ್ ಅವರನ್ನು ನೇಮಕ ಮಾಡಲಾಗಿದೆ. ಎರಡು ವರ್ಷಗಳ ಅವಧಿಗೆ ಅವರನ್ನು ನೀತಿ ಆಯೋಗದ ಸಿಇಒ ಹುದ್ದೆಗೆ ನೇಮಕಗೊಳಿಸಿರುವುದಾಗಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಶುಕ್ರವಾರ ಪ್ರಕಟಿಸಿದೆ.
ಹಾಲಿ ಕಾರ್ಯನಿರ್ವಹಿಸುತ್ತಿರುವ ಸಿಇಒ ಅಮಿತಾಭ್ ಕಾಂತ್ ಅವರ ಅಧಿಕಾರವಧಿ ಜೂನ್ 30, 2022 ರಂದು ಅಂತ್ಯಗೊಳ್ಳಲಿದೆ. ತದನಂತರ ಅಯ್ಯರ್ ಅಧಿಕಾರ ಸ್ವೀಕರಿಸಲಿದ್ದಾರೆ.ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಪರಮೇಶ್ವರನ್ ಅಯ್ಯರ್ ಅವರ ನೇಮಕಕ್ಕೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
ಮುಂದಿನ ಆದೇಶದವರೆಗೂ ಅವರು ನೀತಿ ಆಯೋಗದ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದು, ಅಮಿತಾಭ್ ಕಾಂತ್ ಅವರಿಗೆ ಅನ್ವಯಿಸಲಾದ ನಿಯಮಗಳು ಮತ್ತು ಷರತ್ತುಗಳು ಪರಮೇಶ್ವರನ್ ಅಯ್ಯರ್ ಅವರಿಗೂ ಅನ್ವಯವಾಗಲಿವೆ ಎಂದು ಸರ್ಕಾರದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ಅಮಿತಾಭ್ ಕಾಂತ್ ಫೆ.17, 2016 ರಂದು ನೀತಿ ಆಯೋಗದ ಸಿಇಒ ಆಗಿ ನೇಮಕವಾಗಿದ್ದರು. ತದನಂತರ ಜೂನ್ 30,2019ರವರೆಗೂ ಅವರ ಅಧಿಕಾರವಧಿಯನ್ನು ವಿಸ್ತರಿಸಲಾಗಿತ್ತು. 2019 ಜೂನ್ 30 ರಂದು ಮತ್ತೆ ಎರಡು ವರ್ಷ ಅಧಿಕಾರವಧಿ ವಿಸ್ತರಣೆಗೊಂಡಿತ್ತು. ಜೂನ್ 2021ರಲ್ಲಿ ಮತ್ತೆ ಒಂದು ವರ್ಷ ಕಾಲ ಕಾಂತ್ ಅವರ ಅಧಿಕಾರವಧಿ ವಿಸ್ತರಣೆಯಾಗಿತ್ತು.