ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಅವರ ಮುತ್ತಾತ ಚಿಮನ್‌ಲಾಲ್ ಹರಿಲಾಲ್ ಸೆಟಲ್‌ವಾಡ್ ಅವರು ಬ್ರಿಟಿಷ್ ಅಧಿಕಾರಿ ಜನರಲ್ ಡಯರ್‌ರನ್ನು ದೋಷಮುಕ್ತಗೊಳಿಸಿದ್ದರು ಎಂದು ಸಾಮಾಜಿಕ ಜಾಲತಾಣ ಬಳಕೆದಾರ ಕಾಂಚನ್‌ಗುಪ್ತಾ @KanchanGupta ಎಂಬುವರು ಟ್ವೀಟ್ ಮಾಡಿದ್ದಾರೆ.
1919ರ ಏಪ್ರಿಲ್ 13ರಂದು ಜಲಿಯನ್‌ವಾಲಾಭಾಗ್ ಹತ್ಯಾಕಾಂಡಕ್ಕೆ ಡಯರ್ ಆದೇಶ ನೀಡಿದ್ದರು. ಈ ಘಟನೆಯ ತನಿಖೆ ನಡೆಸಿದ್ದ ಹಂಟರ್ ಆಯೋಗದ ಸದಸ್ಯರಾಗಿದ್ದ ಸೆಟಲ್‌ವಾಡ್ ಅವರು ಸಹಿ ಮಾಡಿದ್ದ ವರದಿಯಲ್ಲಿ ಡಯರ್ ತಪ್ಪಿತಸ್ಥ ಅಲ್ಲ ಎಂದು ಬರೆಯಲಾಗಿದೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ತೀಸ್ತಾ ಅವರ ಮುತ್ತಾತ ಹಂಟರ್ ಆಯೋಗದ ಸದಸ್ಯರಾಗಿದ್ದುದು ಹಾಗೂ ವರದಿಗೆ ಸಹಿ ಮಾಡಿದ್ದುದು ನಿಜ. ಆದರೆ ವರದಿಯು ಡಯರ್‌ರನ್ನು ದೋಷಮುಕ್ತಗೊಳಿಸಿದೆ ಎಂಬುದು ದೂರವಾದುದು ಎಂದು 'ದಿ ಕ್ವಿಂಟ್ ವರದಿ' ಮಾಡಿದೆ. ಮೆಜಾರಿಟಿ ಹಾಗೂ ಮೈನಾರಿಟಿ ಎಂಬ ಎರಡು ವರದಿಗಳು ಸಲ್ಲಿಕೆಯಾಗಿದ್ದವು. ಡಯರ್ ತಮ್ಮ ಕರ್ತವ್ಯ ನಿರ್ವಹಿಸಿದ್ದರೂ, ಅವರು ಮಾಡಿದ್ದು ತಪ್ಪು ಎಂದು ಬ್ರಿಟಿಷ್ ಸದಸ್ಯರು ಸಹಿ ಮಾಡಿದ್ದ ಮೆಜಾರಿಟಿ ವರದಿ ಉಲ್ಲೇಖಿಸಿದೆ. ಡಯರ್ ಮಾಡಿದ್ದು ತಪ್ಪು ಎಂದು ನೇರವಾಗಿ ಉಲ್ಲೇಖಿಸಿದೆ. ಎರಡೂ ವರದಿಯಲ್ಲಿ ಡಯರ್ ತಪ್ಪಿತಸ್ಥ ಎಂದೇ ಹೇಳಲಾಗಿದೆ.