ನವದೆಹಲಿ :ಮಾನವ ಹಕ್ಕುಗಳ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳ ಬಂಧನದ ವಿರುದ್ಧ ವಿಶ್ವಸಂಸ್ಥೆ ಅಧಿಕಾರಿಗಳ ಹೇಳಿಕೆಗಳಿಗೆ ಬುಧವಾರ ಕಟುವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು,ಇದು ಸಂಪೂರ್ಣವಾಗಿ ಅನಗತ್ಯವಾಗಿದ್ದು, ಭಾರತದ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪವಾಗಿದೆ ಎಂದು ಹೇಳಿದೆ.
'ಸೆಟ್ಲವಾಡ್ ಮತ್ತು ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳ ಬಂಧನವು ನಮಗೆ ತೀವ್ರ ಕಳವಳವನ್ನುಂಟು ಮಾಡಿದೆ ಮತ್ತು ಅವರ ತಕ್ಷಣ ಬಿಡುಗಡೆಗೆ ಕರೆ ನೀಡುತ್ತಿದ್ದೇವೆ. 2002ರ ಗುಜರಾತ್ ದಂಗೆಗಳ ಸಂತ್ರಸ್ತರೊಂದಿಗಿನ ಕ್ರಿಯಾಶೀಲತೆ ಮತ್ತು ಏಕತೆಗಾಗಿ ಅವರಿಗೆ ಕಿರುಕುಳವನ್ನು ನೀಡಕೂಡದು' ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿ ಕಚೇರಿ (ಒಎಚ್‌ಸಿಎಚ್‌ಆರ್)ಯು ಮಂಗಳವಾರ ಟ್ವೀಟಿಸಿತ್ತು.
ಗುಜರಾತ್ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ದಳವು ಸೆಟಲ್ವಾಡ್ ಅವರೊಂದಿಗೆ ಮಾಜಿ ಡಿಜಿಪಿ ಆರ್.ಬಿ.ಶ್ರೀಕುಮಾರ್ ಅವರನ್ನೂ ಬಂಧಿಸಿದೆ. ಇನ್ನೋರ್ವ ಮಾಜಿ ಪೊಲೀಸ್ ಅಧಿಕಾರಿ ಸಂಜೀವ ಭಟ್ ಅವರು ಕಸ್ಟಡಿ ಸಾವಿನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದು,ಅವರನ್ನೂ ಪ್ರಕರಣದಲ್ಲಿ ಹೆಸರಿಸಲಾಗಿದೆ.
'ಸೆಟಲ್ವಾಡ್ ಮತ್ತು ಇತರ ಇಬ್ಬರ ವಿರುದ್ಧ ಕಾನೂನು ಕ್ರಮಕ್ಕೆ ಸಂಬಂಧಿಸಿದಂತೆ ಒಎಚ್‌ಸಿಎಚ್‌ಆರ್ ಹೇಳಿಕೆಯನ್ನು ನಾವು ಗಮನಿಸಿದ್ದೇವೆ 'ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿಯವರು,ಭಾರತದಲ್ಲಿಯ ಅಧಿಕಾರಿಗಳು ಕಾನೂನಿನ ಉಲ್ಲಂಘನೆಯ ವಿರುದ್ಧ ಸ್ಥಾಪಿತ ನ್ಯಾಯಾಂಗ ಪ್ರಕ್ರಿಯೆಗಳಿಗೆ ಅನುಗುಣವಾಗಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುತ್ತಾರೆ. ಇಂತಹ ಕಾನೂನು ಕ್ರಮಗಳಿಗೆ ಕ್ರಿಯಾಶೀಲತೆಗಾಗಿ ಕಿರುಕುಳ ಎಂದು ಹಣೆಪಟ್ಟಿ ಹಚ್ಚುವುದು ದಾರಿ ತಪ್ಪಿಸುವಂಥದ್ದಾಗಿದೆ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಕ್ಷಕರ ಕುರಿತು ವಿಶೇಷ ವರದಿಗಾರ್ತಿ ಮೇರಿ ಲಾಲರ್ ಅವರೂ ಸೆಟ್ಲವಾಡ್ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿ,ಪೊಲೀಸ್ ಕ್ರಮವು ಅತ್ಯಂತ ಕಳವಳಕಾರಿಯಾಗಿದೆ. ಮಾನವ ಹಕ್ಕುಗಳಿಗಾಗಿ ಹೋರಾಡುವುದು ಅಪರಾಧವಲ್ಲ. ಸೆಟಲ್ವಾಡ್ ದ್ವೇಷ ಮತ್ತು ತಾರತಮ್ಯದ ವಿರುದ್ಧ ಪ್ರಬಲ ಧ್ವನಿಯಾಗಿದ್ದಾರೆ ಎಂದು ಹೇಳಿದ್ದರು.