ಮಂಜೇಶ್ವರ: ರಾ. ಹೆದ್ದಾರಿ ಅಗಲೀಕರಣದ ಭಾಗವಾಗಿ ತುಪಾಡಿಯಿಂದ ಆರಂಭಗೊಂಡ ಕಾಮಗಾರಿಯಲ್ಲಿ ಅಲ್ಲಲ್ಲಿ ಎಡವಟ್ಟಾಗಿರುವುದು ಬಿರುಸಿನ ಮಳೆ ಆರಂಭವಾದ ಬಳಿಕ ಇದೀಗ ಎದ್ದು ತೋರುತ್ತಿದೆ.
ಕಳೆದೆರಡು ದಿವಸಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲೇ ನೀರು ಕಟ್ಟಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಜೊತೆಗೆ ಸರ್ವೀಸ್ ರಸ್ತೆಗಳ ಬದಿಯಲ್ಲಿ ಪೈಪುಗಳನ್ನು ಹಾಕಲೆಂದು ತೋಡಲಾಗಿರುವ ಹೊಂಡಗಳಲ್ಲಿ ನೀರು ತುಂಬಿಕೊಂಡ ಹಿನ್ನೆಲೆಯಲ್ಲಿ ರಸ್ತೆ ಯಾವುದು ಗುಂಡಿ ಯಾವುದೆಂದು ತಿಳಿಯದೆ ಸಾರ್ವಜನಿಕರು ಆತಂಕಕ್ಕೆ ಸಿಲುಕಿದ್ದು ತೂಮಿನಾಡಿನ ಪರಿಸರ ಸಮುದ್ರದಂತೆ ಕಂಡು ಬಂದಿದ್ದು ಖಾಸಗಿ ಹಾಗೂ ಸರ್ಕಾರಿ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು ಸಂಕಷ್ಟ ಪಡುವ ದೃಶ್ಯ ಕಂಡು ಬಂತು.
ಕುಂಜತ್ತೂರು ಹಳೆಯ ಆರ್ ಟಿ ಒ ಪರಿಸರದಲ್ಲಿ ಸರ್ವೀಸ್ ರಸ್ತೆಗೆ ತಾಗಿ ಮಸೀದಿ, ಶಾಲೆ, ಕ್ಷೇತ್ರ ಹಾಗೂ ಲಕ್ಷಂವೀಡು ಕಾಲನಿಯಲ್ಲಿ ನೂರಾರು ಕುಟುಂಬಗಳು ವಾಸಿಸುತಿದ್ದು ಎಲ್ಲರೂ ಇಲ್ಲಿಯ ಸರ್ವೀಸ್ ರಸ್ತೆಯನ್ನೇ ಅವಲಂಭಿಸಬೇಕಾಗಿದೆ. ರಾ. ಹೆದ್ದಾರಿ ಕಾಮಗಾರಿಯೊಂದಿಗೆ ನೀರು ಹರಿದು ಹೋಗುವ ಹಾಗೂ ಸಾರ್ವಜನಿಕರಿಗೆ ವಾಹನ ಸಂಚಾರಕ್ಕೆ ಹಾಗೂ ಕಾಲ್ನಡಿಗೆ ಯಾತ್ರಿಕರಿಗೆ ನಡೆದು ಹೋಗಲು ವ್ಯವಸ್ಥೆಯನ್ನು ಕಲ್ಪಿಸದಿರುವುದು ನಾಗರೀಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ತೋಡು ಯಾವುದು ರೋಡು ಯಾವುದು ಎನ್ನುವುದೇ ತಿಳಿಯದಂತ ಸ್ಥಿತಿ ತೂಮಿನಾಡು ಕುಂಜತ್ತೂರು ಗಳಲ್ಲಿ ಗುರುವಾರ ನಿರ್ಮಾಣವಾಗಿದೆ.
ಇದೀಗ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ದುರಂತ ಸಂಭವಿಸುವುದಕ್ಕಿಂತ ಮುನ್ನ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿ ಇದಕ್ಕೊಂದು ಪರಿಹಾರ ಕಲ್ಪಿಸುವಂತೆ ಇಲ್ಲಿಯ ನಾಗರೀಕರು ಆಗ್ರಹಿಸಿದ್ದಾರೆ.