ಗುರುಗ್ರಾಮ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಶಾಸಕ ಕುಲದೀಪ್ ಬಿಷ್ಣೋಯಿ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ಕಾಂಗ್ರೆಸ್ ಶನಿವಾರ ಉಚ್ಚಾಟನೆ ಮಾಡಿದೆ.
ಹಿಸಾರ್ ಜಿಲ್ಲೆಯ ಅದಮ್‌ಪುರ್ ಕ್ಷೇತ್ರದ ಶಾಸಕರಾಗಿರುವ ಕುಲದೀಪ್, ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಅವರಿಗೆ ಅಡ್ಡ ಮತದಾನ ಮಾಡಿದ್ದರು.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, 'ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಶಾಸಕ ಕುಲದೀಪ್ ಬಿಷ್ಣೋಯಿ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರ ಸ್ಥಾನ ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಂದ ಉಚ್ಚಾಟನೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.
ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಕುಲ್ದೀಪ್ ಬಿಷ್ಣೋಯಿ ಅಡ್ಡಮತದಾನ ಮಾಡಿದ್ದರು ಎಂದು ಹೇಳಲಾಗಿತ್ತು. ಇದಕ್ಕೆ ಇಂಬು ನೀಡುವಂತೆ ಪಕ್ಷದ ಎಲ್ಲ ಸಭೆಗಳಿಂದ ದೂರವಿದ್ದ ಬಿಷ್ಣೋಯಿ, ತನ್ನ ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕಿದ್ದೇನೆ ಎಂದು ಹೇಳಿದ್ದರು.
ಹರಿಯಾಣದ ಎರಡು ಕ್ಷೇತ್ರಗಳ ಪೈಕಿ ಬಿಜೆಪಿಯ ಕೃಷ್ಣಲಾಲ್ ಪನ್ವರ್, ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಜಯ ಗಳಿಸಿದ್ದರು.