ಕೊಯಂಬತ್ತೂರು: ಆನೆಮರಿಯೊಂದನ್ನು ಆನೆಗಳ ಹಿಂಡು ಭದ್ರತೆ ನೀಡಿ ಕರೆದೊಯ್ಯುತ್ತಿರುವ ಮನಮೋಹಕ ವೀಡಿಯೊ ವೈರಲ್ ಆಗತೊಡಗಿದೆ.
ಪುಟ್ಟ ಕಾಲುಗಳಲ್ಲಿ ದೊಡ್ಡ ಆನೆಗಳೊಂದಿಗೆ ಸಾಧ್ಯವಾದಷ್ಟೂ ವೇಗವಾಗಿ ನಡೆಯುತ್ತಿರುವ ಆನೆ ಮರಿಯ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ ನಂದ ಅವರು ಹಂಚಿಕೊಂಡಿದ್ದು, ನವಜಾತ ಆನೆ ಮರಿಗೆ ಆನೆ ಹಿಂಡು ನೀಡುವುದಕ್ಕಿಂತಲೂ ಸುರಕ್ಷಿತವಾದ ಭದ್ರತೆಯನ್ನು ಈ ಭೂಮಿಯ ಮೇಲೆ ಬೇರೆ ಯಾರೂ ನೀಡಲು ಸಾಧ್ಯವಿಲ್ಲ. ಅದು ಝೆಡ್+++ ಭದ್ರತೆ. ಆನೆಗಳ ಹಿಂಡು ಸತ್ಯಮಂಗಲಂ ಕೊಯಂಬತ್ತೂರು ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಈ ವಿಡಿಯೋ ಸೆರೆಹಿಡಿಯಲಾಗಿದೆ.
ಅರಣ್ಯ ಅಧಿಕಾರಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮರಿ ಆನೆಯನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಆನೆಗಳು ತಮ್ಮ ನಡುವೆ ಅತ್ಯಂತ ಬಲವಾದ ಬಾಂಧವ್ಯ ಹೊಂದಿರುತ್ತದೆ. ಹಿಂಡಿನಲ್ಲಿರುವ ಪ್ರತಿಯೊಂದು ಹೆಣ್ಣು ಆನೆಯೂ ಮರಿಗಳನ್ನು ತಾಯಿಯಂತೆಯೇ ಸುರಕ್ಷಿತವಾಗಿ ಕಾಪಾಡುತ್ತದೆ ಮರಿಗಳೆಡೆಗೆ ಅವು ಅತ್ಯಂತ ರಕ್ಷಣಾತ್ಮಕವಾಗಿರುತ್ತವೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.