ಕಾಸರಗೋಡು: ಕೋವಿಡ್ ತಲ್ಲಣದ ನಂತರ ಕೇರಳಾದ್ಯಂತ ಹೊಸ ಶೈಕ್ಷಣಿಕ ವರ್ಷ ಬುಧವಾರ ಆರಂಭಗೊಂಡಿತು. ಜಿಲ್ಲಾಮಟ್ಟದ ಶಾಲಾ ಪ್ರವೇಶೋತ್ಸವ ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಬಂದರು ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಅಹಮ್ಮದ್ ದೇವರಕೋವಿಲ್ ಉದ್ಘಾಟಿಸಿದರು. ಹೊಸದುರ್ಗ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ ಮಡಿಕೈ ವೊಕೇಶನಲ್ ಹೈಯರ್ ಸಎಕೆಂಡರಿ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು.
ಶಾಲೆ ಪುನರಾರಂಭಗೊಳ್ಳುತ್ತಿದ್ದಂತೆ ಮೊದಲ ತರಗತಿಗೆ 12027 ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಹೊಸದಾಗಿ ಆಗಮಿಸಿದ ಮಕ್ಕಳನ್ನು ಬೆಲೂನ್ ನೀಡಿ, ಟೋಪಿ ಧರಿಸಿ ಬರಮಾಡಿಕೊಳ್ಳಲಾಯಿತು. ಸಿಹಿ ತಿನಿಸನ್ನೂ ಹಂಚಲಾಯಿತು.
ಕೋವಿಡ್ ನ ಭೀತಿ ದೂರವಾಗದ ಹಿನ್ನೆಲೆಯಲ್ಲಿ ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಮುಂಜಾಗ್ರತಾ ಕ್ರಮಗಳೊಂದಿಗೆ ಹೊಸ ಅಧ್ಯಯನ ವರ್ಷ ಆರಂಭಗೊಂಡಿತು. ಜಿಲ್ಲೆಯಲ್ಲಿ 34,908 ಹೊಸ ವಿದ್ಯಾರ್ಥಿಗಳು ಶಾಲೆಗಳಿಗೆ ಸೇರ್ಪಡೆಗೊಂಡಿದ್ದಾರೆ. ಎರಡು ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಮೊದಲ ದಿನ ಜಿಲ್ಲೆಯ ಶಾಲೆಗಳಿಗೆ ಆಗಮಿಸಿದ್ದಾರೆ.
ಜಿಲ್ಲೆಯಲ್ಲಿ 38946 ಮಕ್ಕಳು ಹೊಸದಾಗಿ ಸೇರ್ಪಡೆ:
ಹೊಸ ಅಧ್ಯಯನ ವರ್ಷದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 38946 ಮಕ್ಕಳು ಸಾರ್ವಜನಿಕ ಶಾಲೆಗಳಲ್ಲಿ ಹೊಸದಾಗಿ ವಿವಿಧ ತರಗತಿಗಳಿಗೆ ಪ್ರವೇಶವನ್ನು ಪಡೆದರು. ಮೊದಲ ತರಗತಿಯಲ್ಲಿ 13067 ಮಕ್ಕಳು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಎರಡನೇ ತರಗತಿಯಲ್ಲಿ 1356, ಮೂರನೇ ತರಗತಿಯಲ್ಲಿ 1232 , ನಾಲ್ಕರಲ್ಲಿ 1373, ಐದರಲ್ಲಿ 7137 , ಆರನೇ ತರಗತಿಗೆ 1819, ಏಳಕ್ಕೆ 1151, ಎಂಟಕ್ಕೆ9272, ಒಂಬತ್ತಕ್ಕೆ 1330 ಹಾಗೂ ಹತ್ತನೇ ತರಗತಿಗೆ 1209 ಮಕ್ಕಳು ಪ್ರವೇಶ ಪಡೆದರು.