ಕೊಚ್ಚಿ: ಬೆಳಗ್ಗೆ ವಾಕಿಂಗ್ ಮಾಡಲು ರಸ್ತೆಯ ಒಂದು ಭಾಗವನ್ನು ಬಂದ್ ಮಾಡಿಸಿದ ಆರೋಪ ಕೇಳಿಬಂದ ಬೆನ್ನಲ್ಲೇ ಕೊಚ್ಚಿ ನಗರದ ಸಂಚಾರ ಪೊಲೀಸ್ ಅಧಿಕಾರಿಗೆ ಕೇರಳ ಪೊಲೀಸ್ ಇಲಾಖೆ ಶೋಕಾಸ್ ನೋಟಿಸ್ ನೀಡಿದೆ. ಪೊಲೀಸ್ ಅಧಿಕಾರಿ ಬೆಳಗ್ಗೆ ವಾಕಿಂಗ್‌ಗೆ ಬಂದಾಗ ಕೊಚ್ಚಿಯ ಕ್ವೀನ್ಸ್ ವಾಕ್‌ವೇ ಪಕ್ಕದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೊಚ್ಚಿಯ ಪಶ್ಚಿಮ ಸಂಚಾರ ಪೊಲೀಸ್ ವಿಭಾಗದ ಸಹಾಯಕ ಕಮಿಷನರ್ ವಿನೋದ್ ಪಿಳ್ಳೈ ಅವರು ಬೆಳಗ್ಗೆ ಕ್ವೀನ್ಸ್ ವಾಕ್‌ವೇ ರಸ್ತೆಯಲ್ಲಿ ವಾಕಿಂಗ್‌ಗೆ ಬಂದಿದ್ದರು. ಭಾನುವಾರದ ರಜಾ ದಿನದಂದು ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಮಕ್ಕಳಿಗೆ ಸೈಕಲ್ ಮತ್ತು ಸ್ಕೇಟಿಂಗ್ ಅಭ್ಯಾಸ ಮಾಡಲು ಈ ರಸ್ತೆಯ ವಿಭಾಗವನ್ನು ಮುಚ್ಚಲಾಗಿತ್ತದೆ. ಆದರೆ, ಪೊಲೀಸ್ ಅಧಿಕಾರಿ ಇತರೆ ದಿನಗಳಲ್ಲಿ ತಮ್ಮ ವಾಕಿಂಗ್‌ಗಾಗಿ ರಸ್ತೆಯನ್ನು ನಿರ್ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ನಿವಾಸಿಗಳು ಹೇಳುವ ಪ್ರಕಾರ, ಕಳೆದ ಮೂರು ದಿನಗಳಿಂದ, ರಸ್ತೆ ಮುಚ್ಚಿದ ಕಾರಣ ದೈನಂದಿನ ಪ್ರಯಾಣದಲ್ಲಿ ತೊಂದರೆಗಳನ್ನು ಎದುರಿಸಬೇಕಾಯಿತು ಎಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಗಳ ಪ್ರಕಾರ, ರಸ್ತೆ ಬ್ಲಾಕ್ ಆಗಿರುವುದರಿಂದ ಮತ್ತೊಂದು ಬದಿಯಿಂದ ಮಕ್ಕಳನ್ನು ಬಸ್ಗೆ ಹತ್ತುವಂತೆ ಒತ್ತಾಯಿಸಲಾಗುತ್ತಿದೆ. ರಸ್ತೆಯ ಮಧ್ಯದಲ್ಲಿ ಕೆಂಪು ಟ್ರಾಫಿಕ್ ತಡೆಗೋಡೆ ಹಾಕಲಾಗಿದ್ದು, ಇನ್ನೊಂದು ದೃಶ್ಯದಲ್ಲಿ ಶಾಲಾ ಬಸ್ ಮುಂದೆ ನಿಂತು ಪೋಷಕರು ರಸ್ತೆಯ ಬದಿಯಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಧಿಕಾರಿಯ ನಡೆಗೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸ್ ಇಲಾಖೆ ಶೋಕಾಸ್ ನೋಟಿಸ್ ಹೊರಡಿಸಿದೆ.
ಕಳೆದ ತಿಂಗಳು ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಐಎಎಸ್ ಅಧಿಕಾರಿಯೊಬ್ಬರು ತಮ್ಮ ನಾಯಿಯನ್ನು ವಾಕಿಂಗ್ ಮಾಡಿಸಲು ಬಯಸಿದ ಕಾರಣ ಅಥ್ಲೀಟ್‌ಗಳನ್ನು ಬೇಗನೆ ಹೊರಡುವಂತೆ ಕೇಳಿದ್ದರು. ಇದು ವಿವಾದ ಸೃಷ್ಟಿಸಿದ ನಂತರ ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ, ಇಬ್ಬರು ಐಎಎಸ್ ಅಧಿಕಾರಿಗಳನ್ನು ದೆಹಲಿಯಿಂದ ಕ್ರಮವಾಗಿ ಲಡಾಖ್ ಮತ್ತು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಲಾಯಿತು.