ಕಾಸರಗೋಡು: ಚಿನ್ನ ಕಳ್ಳಸಾಗಾಟಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆಗೆ ಒತ್ತಾಯಿಸಿ ಯುವ ಕಾಂಗ್ರೆಸ್ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಚಿನ್ನ ಕಳ್ಳಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುಟುಂಬ, ಮಾಜಿ ಸಚಿವ ಕೆ.ಟಿ.ಜಲೀಲು ಹಾಗೂ ಇತರ ಐಎಎಸ್ ಅಧಿಕಾರಿಗಳ ಹೆಸರು ಒಳಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಯೂತ್ ಕಾಂಗ್ರೆಸ್ ರಾಜ್ಯ ಸಮಿತಿ ಅಧ್ಯಕ್ಷ ರಿಜಿಲ್ ಮಾಕ್ಕುಟ್ಟಿ ಧರಣಿ ಉದ್ಘಾಟಿಸಿ ಮಾತನಾಡಿ, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕಳ್ಳರು ಹಾಗೂ ಭ್ರಷ್ಟಾಚಾರಿಗಳಿಂದ ತುಂಬಿಕೊಂಡಿದ್ದು, ಇವರು ಅಧಿಕಾರದಲ್ಲಿ ಮುಂದುವರಿಯುವ ಹಕ್ಕು ಕಳೆದುಕೊಂಡಿರುವುದಾಗಿ ತಿಳಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಬಿ ಪಿ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಜೋಮನ್ ಜೋಸ್ ಜಿಲ್ಲಾ ಪದಾಧಿಕಾರಿಗಳಾದ ವಸಂತನ್ ಪಟುಪ್, ರಾಜೇಶ್ ತಂಪನ್, ಇಸ್ಮಾಯಿಲ್ ಚಿತ್ತಾರಿ, ಕಾರ್ತಿಕೇಯನ್ ಪೆರಿಯ, ಸತ್ಯನಾಥನ್ ಪಾತ್ರವಳಪ್ಪಿಲ್, ಅಖಿಲ್ ಅಯ್ಯಂಕಾವ್, ರಾಫಿ ಅಡೂರ್, ರಾಜಿಕಾ ಉದಯಮಂಗಲಂ, ಸಾಜಿದ್ ಕಮ್ಮಡಂ, ಶೋಣಿ ಕೆ ಥಾಮಸ್, ರೋಹಿತ್ ಏಳುವಾಟ್, ರಾಜು ಕುರುಚಿಕ್ಕುನ್ ಉಪಸ್ಥಿತರಿದ್ದರು. ವಿದ್ಯಾನಗರ್ ಸರ್ಕಾರಿ ಕಾಲೇಜು ವಠಾರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪೊಲೀಸರ ತಡೆಬೇಲಿ ಭೇದಿಸಿ ಡಿಸಿ ಕಚೇರಿ ಮುನ್ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದರು.