ಜೈಪುರ: ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ದೇವಿ ಸೀತೆಯನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವೇಕೆ ಹಿಂದೂಗಳನ್ನು ಹೆಚ್ಚು ದ್ವೇಷಿಸುತ್ತದೆ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷದ ವಕ್ತಾರ ಮತ್ತು ರಾಜಸ್ಥಾನದಲ್ಲಿ ರಾಜ್ಯಸಭೆ ಚುನಾವಣಾ ಅಭ್ಯರ್ಥಿಯಾಗಿರುವ ರಣದೀಪ್ ಸುರ್ಜೆವಾಲ, ಮಹಾಭಾರತದಲ್ಲಿ ಬರುವ ದ್ರೌಪದಿ ವಸ್ತ್ರಾಪಹರಣ ಪ್ರಸಂಗವನ್ನು ವಿವರಿಸುವಾಗ ದ್ರೌಪದಿ ಬದಲಿಗೆ ತಪ್ಪಾಗಿ ಸೀತೆ ಹೆಸರನ್ನು ಉಲ್ಲೇಖಿಸಿದ್ದರು.
ಸುರ್ಜೆವಾಲ ಅವರು ಮಾತನಾಡಿರುವ ವಿಡಿಯೊ ಹಂಚಿಕೊಂಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ರಾಜ್ಯವರ್ಧನ್ ಸಿಂಗ್ ರಾಥೋಡ್, 'ಕಾಂಗ್ರೆಸ್ ಏಕೆ ಹಿಂದೂಗಳನ್ನು ಹೆಚ್ಚು ದ್ವೇಷಿಸುತ್ತದೆ' ಎಂದು ಪ್ರಶ್ನಿಸಿದ್ದಾರೆ.
'ಚುನಾವಣಾ ಸಂದರ್ಭದಲ್ಲಿ ದೇವಾಲಯದಿಂದ ದೇವಾಲಯಕ್ಕೆ ಸುತ್ತು ಹಾಕುವ ರಾಹುಲ್ ಗಾಂಧಿ, ಹಿಂದುತ್ವ ಎಂಬ ಪವಿತ್ರ ಪದ ಕೇಳಿದರೆ ಸಿಟ್ಟಿಗೇಳುತ್ತಾರೆ. ಅವರ ಪಕ್ಷವು ಭಗವಂತ ರಾಮನನ್ನು ಅಪಮಾನ ಮಾಡುತ್ತಲೇ ಬಂದಿದೆ. ಮಾತೆ ಸೀತೆ ಕುರಿತಂತೆ ಅಸಭ್ಯ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಹಿಂದೂಗಳ ನಂಬಿಕೆಯನ್ನು ನೋಯಿಸಿದೆ' ಎಂದು ಅವರು ಕಿಡಿಕಾರಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಕಣಕ್ಕಿಳಿಸಿರುವ ಮೂವರು ಅಭ್ಯರ್ಥಿಗಳ ಪೈಕಿ ಸುರ್ಜೆವಾಲ ಸಹ ಒಬ್ಬರು.
ದ್ರೌಪದಿ ಬದಲಿಗೆ ಸೀತೆ ಹೆಸರನ್ನು ಹೇಳಿ ಎಡವಟ್ಟು ಮಾಡಿಕೊಂಡಿರುವ ಸುರ್ಜೆವಾಲ ಇದೇವೇಳೆ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಬಹುತ್ವ ಗೆಲ್ಲಲಿದೆ, ಪ್ರಜಾಪ್ರಭುತ್ವಕ್ಕೆ ಜಯ ಸಿಗಲಿದೆ, ಸಂವಿಧಾನ ಗೆಲುವು ಸಾಧಿಸಲಿದೆ, ಕಾನೂನು ಗೆಲ್ಲುತ್ತದೆ, ನೈತಿಕತೆಗೆ ಜಯ ಸಿಗಲಿದೆ. ಒಂದು ಸಮಯದಲ್ಲಿ ಸೀತೆಯ ವಸ್ತ್ರಾಪಹರಣ(ದ್ರೌಪದಿ ಬದಲು ಸೀತೆ ಎಂದು ತಪ್ಪಾಗಿ ಹೇಳಿದ ಸುರ್ಜೆವಾಲ) ಮಾಡಿದ ಹಾಗೆ, ಸುಳ್ಳು ಹೇಳಿಕೊಂಡು ಓಡಾಡುತ್ತಿರುವವರು ಪ್ರಜಾಪ್ರಭುತ್ವದ ವಸ್ತ್ರಾಪಹರಣ ಮಾಡಲು ಯತ್ನಿಸುತ್ತಿದ್ದಾರೆ. ಅವರಿಗೆ ಖಂಡಿತಾ ಸೋಲಾಗುತ್ತದೆ. ಅವರು ಜನರ ಮುಂದೆ ಬಯಲಾಗುತ್ತಾರೆ' ಎಂದು ಸುರ್ಜೆವಾಲ ಹೇಳಿದ್ದಾರೆ.