ಕಾಸರಗೋಡು: ಪನತ್ತಡಿ ಪಂಚಾಯಿತಿಯ ಓಟ್ಟಮಲೆಯಲ್ಲಿ 28ರ ಹರೆಯದ ಪುತ್ರಿಯನ್ನು ಕೊಲೆಗೈದು ತಾಯಿ ನೇಣಿಗೆ ಶರಣಾದ ಘಟನೆ ಅತ್ಯಂತ ದಾರುಣ ಮತ್ತು ಹೃದಯವಿದ್ರಾವಕವಾದುದು ಎಂದು ಸಮಸದ ರಾಜ್ ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತ ಪುತ್ರಿಯನ್ನು ರಕ್ಷಿಸಲಾಗದೆ ಆಕೆಯ ಜೀವ ತೆಗೆದು, ತಾನೂ ಆತ್ಮಹತ್ಯೆಗೈದಿರುವುದು ಸರ್ಕಾರದ ಧೋರಣೆಗೆ ನಿದರ್ಶನವಾಗಿದ್ದು, ಸಮಾಜ ತಲೆತಗ್ಗಿಸುವಂತಾಗಿದೆ. ಇಂತಹ ಘಟನೆಗಳು ಕಾಸರಗೋಡು ಜಿಲ್ಲೆಯ ಇತರೆಡೆಯಲ್ಲೂ ಮರುಕಳಿಸುವ ಸಾಧ್ಯತೆಯಿದೆ. ಜಿಲ್ಲೆಯ 6287 ಮಂದಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಎರಡು ಬಾರಿ ಆದೇಶ ನೀಡಿದರೂ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸದೆ ತಿರಸ್ಕಾರ ಮನೋಭಾವ ಪ್ರಕಟಿಸಿದೆ..
ಸುಪ್ರಿಂ ಕೋರ್ಟ್ ಮತ್ತು ರಾಷ್ಟ್ರೀಯ ಮಾನವ ಹಕ್ಕು ಆಯೋಗ ನಷ್ಟಪರಿಹಾರ ನೀಡುವಂತೆ ರಾಜ್ಯ ಸರ್ಕಾರದಕ್ಕೆ ಸೂಚಿಸಿದರೂ, ಇದನ್ನು ಪಾಲಿಸದಾದಾಗ ಮಾನವ ಹಕ್ಕು ಆಯೋಗ ಮತ್ತು ಸುಪ್ರೀಂ ಕೋರ್ಟ್, ಮತ್ತೆ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಬೇಕಾಗಿ ಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ 200 ಕೋಟಿ ರೂ. ಬಿಡುಗಡೆಮಾಡಿದ್ದರೂ, ಇದನ್ನು ಸಂತ್ರಸ್ತರಿಗೆ ತಲುಪಿಸಲು ಇನ್ನೂ ಸಾಧ್ಯವಾಗದಿರುವುದು ದೌರ್ಭಾಗ್ಯಕರ. ಸಂತ್ರಸ್ತರಿಗಿರುವ ಸಹಾಯಧನವನ್ನು ವಿತರಿಸಲು ಜಿಲ್ಲಾಧಿಕಾರಿ ಹಾಗೂ ಎಂಡೋಸಲ್ಫಾನ್ ಕೋಶದ ಅಧಿಕಾರಿಗಳಿಗೆ ತಕ್ಷಣ ಆದೇಶ ನೀಡಬೇಕು. ಪನತ್ತಡಿಯಲ್ಲಿ ತಾಯಿ ಮತ್ತು ಮಗಳ ಸಾವಿಗೆ ರಾಜ್ಯ ಸರ್ಕಾರ ಸಂಪೂರ್ಣ ಹೊಣೆಯಾಗಿದೆ. ಲಿಸ್ಟ್‍ನಲ್ಲಿರುವ ಎಲ್ಲಾ ಸಂತ್ರಸ್ತರಿಗೂ ಅರ್ಹ ಸಹಾಯವನ್ನು ತುರ್ತುವಾಗಿ ನೀಡದಿದ್ದಲ್ಲಿ, ಮತ್ತಷ್ಟು ಜೀವಹಾನಿಗೆ ಕಾರಣವಾಗಬಲ್ಲುದು. ಇಂತಹ ಸಾವಿನ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಮನ:ಪೂರ್ವಕವಲ್ಲದ ಕೊಲೆಕೃತ್ಯಕ್ಕೆ ಕೇಸು ದಾಖಲಿಸಬೇಕಾಗಿದೆ ರಾಜ್ ಮೋಹನ್ ಉಣ್ಣಿತ್ತಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.