ಕಾಸರಗೋಡು: ಕೇರಳ ರಸ್ತೆ ಸಾರಿಗೆ ನಿಗಮದ(ಕೆಎಸ್ಸಾರ್ಟಿಸಿ)ಕೇಂದ್ರ ಕಚೇರಿಯನ್ನು ಕಾಸರಗೋಡಿನಿಂದ ಹೊಸದುರ್ಗ ಕೆಎಸ್ಸಾರ್ಟಿಸಿ ಸಬ್ ಡಿವಿಶನಲ್ ಕೇಂದ್ರಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಸರ್ಕಾರ ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದೆ. ಈ ಮೂಲಕ ಕೆಎಸ್ಸಾರ್ಟಿಸಿ ಜಿಲ್ಲಾ ಕೇಂದ್ರ ಕಚೇರಿಯನ್ನು ಕಾಸರಗೋಡಿನಲ್ಲಿ ಉಳಿಸಿಕೊಳ್ಳಲು ನಡೆಯುತ್ತಿರುವ ಹೋರಾಟಕ್ಕೆ ಗೆಲುವು ಲಭಿಸಿದಂತಾಗಿದೆ.
ಸಮಸ್ಯೆ ಬಗ್ಗೆ ಸಾರಿಗೆ ಸಚಿವರು ನಿಗಮದ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಶಾಸಕರ ಜತೆ ಚರ್ಚಿಸಿ ಕೇಂದ್ರ ಕಚೇರಿ ಸ್ಥಳಾಂತರಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಕಾಸರಗೋಡು 'ತುಳುನಾಡ್ ಕಾಂಪ್ಲೆಕ್ಸ್'ನಲ್ಲಿ ಚಟುವಟಿಕೆ ನಡೆಸುತ್ತಿರುವ ಕೆಎಸ್ಸಾರ್ಟಿಸಿ ಜಿಲ್ಲಾ ಕೇಂದ್ರವನ್ನು ಜೂನ್ 1ರಂದು ಕಾಞಂಗಾಡಿಗೆ ಸ್ಥಳಾಂತರಿಸಿ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಕಾಸರಗೋಡು ಶಾಸಕ ಎನ್. ಎನೆಲ್ಲಿಕುನ್ನು ಅವರು ಕೆಎಸ್ಸಾರ್ಟಿಸಿ ಕೇಂದ್ರ ಸ್ಥಳಾಂತರಿಸುವುದರ ವಿರುದ್ಧ ಸಾರ್ವಜನಿಕ ಹೋರಾಟದ ಎಚ್ಚರಿಕೆ ನೀಡಿದ್ದರು, ಅಲ್ಲದೆ ದಿಗ್ಬಂಧನ ಚಳವಳಿಯನ್ನೂ ನಡೆಸಿದ್ದರು. ಅತಿ ಹೆಚ್ಚು ಆದಾಯ ತಂದುಕೊಡುತ್ತಿರುವ ಕಾಸರಗೋಡು ಕೇಂದ್ರವನ್ನು ಕಾಞಂಗಾಡಿಗೆ ಸ್ಥಳಾಂತರಿಸುವ ಮೂಲಕ ಹಿಂಬಡ್ತಿ ನೀಡಲು ಯತ್ನಿಸಿರುವುದಾಗಿ ನಾನಾ ಸಂಘಟನೆಗಳ ಪದಾಧಿಕಾರಿಗಳು ದೂರಿದ್ದಾರೆ.
ಕಾಸರಗೋಡಿನ ತುಳುನಾಡು ಕಾಂಪ್ಲೆಕ್ಸ್ ಎರಡು ಅಂತಸ್ತಿನ 16ಸಾವಿರ ಚದರ ಅಡಿ ವಿಸ್ತೀರ್ಣವುಳ್ಳ ಬೃಹತ್ ಕಟ್ಟಡವಾಗಿದ್ದು, ಪ್ರಸಕ್ತ ನೆಲಮಹಡಿಯಲ್ಲಿ ಬಸ್ ನಿಲ್ದಾಣ, ಎರಡನೇ ಮಹಡಿಯಲ್ಲಿ ಜಿಲ್ಲಾ ಕಚೇರಿ, ತರಬೇತಿ ಕೇಂದ್ರ, ಇಶ್ರಾಂತಿ ಕೊಠಡಿಗಳನ್ನು ಹೊಂದಿದೆ. ಕೇಂದ್ರ ಕಚೇರಿಯನ್ನು ಕಾಞಂಗಾಡಿಗೆ ಸ್ಥಳಾಂತರಿಸುವ ಮೂಲಕ ಈ ಸುಸಜ್ಜಿತ ಕಟ್ಟಡವನ್ನು ಬಾಡಿಗೆಗೆ ನೀಡಿ, ಇದರಿಂದ ಆದಾಯ ಹೆಚ್ಚಿಸುವ ಯೋಜನೆಯನ್ನು ಸರ್ಕಾರ ಹೊಂದಿರುವುದಾಗಿ ಆರೋಪ ಕೇಳಿ ಬರುತ್ತಿದೆ. ಸರ್ಕಾರದ ಧೋರಣೆಯನ್ನು ಕೆಎಸ್ಸಾರ್ಟಿಸಿ ನೌಕರರ ಸಂಘಟನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಖಂಡಿಸಿದೆ.
ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳದಿದ್ದಲ್ಲಿ ಹೋರಾಟ ಮುಂದುವರಿಸುವುದಾಗಿ ಶಾಸಕ ಎನ್.ಎ ನೆಲ್ಲಿಕುನ್ನು ಹೇಳಿಕೆಯಲ್ಲಿ ತಿಳಿಸಿದ್ದಾರೆ.