ನವದೆಹಲಿ: ಕ್ರಾಶ್ ಟೆಸ್ಟ್ ನ ಆಧಾರದಲ್ಲಿ ಆಟೋಮೊಬೈಲ್ ಗಳಿಗೆ ಸ್ಟಾರ್ ರೇಟಿಂಗ್ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹೊಸದಾಗಿ ಜಾರಿಗೊಳ್ಳುತ್ತಿರುವ ಭಾರತ್ ಎನ್ ಸಿಎಪಿ ಯೋಜನೆಯಡಿ ಕಾರು ಮೌಲ್ಯಮಾಪನ ಕ್ರಮದಲ್ಲಿ ಈ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ ಎಂದು ಗಡ್ಕರಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಭಾರತ್ ಎನ್ ಸಿಎಪಿ ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕಾರ್ಯನಿರ್ವಹಣೆ ಮಾಡಲಿದ್ದು, ಸ್ಟಾರ್ ರೇಟಿಂಗ್ ಆಧಾರದಲ್ಲಿ ಸುರಕ್ಷಿತ ಕಾರುಗಳ ಖರೀದಿಗೆ ಅನುವು ಮಾಡಿಕೊಡಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಒರಿಜಿನಲ್ ಎಕ್ವಿಪ್ಮೆಂಟ್ ಉತ್ಪಾದಕರು (ಒಇಎಂ) ಗಳ ನಡುವೆ ಆರೋಗ್ಯಕರವಾದ ಸ್ಪರ್ಧೆಯನ್ನು ಈ ಯೋಜನೆ ಉತ್ತೇಜಿಸಲಿದೆ ಎಂದು ತಿಳಿಸಿದ್ದಾರೆ. ಭಾರತ್ ಎನ್ ಸಿಎಪಿ ಗೆ ಸಂಬಂಧಿಸಿದಂತೆ ಡ್ರಾಫ್ಟ್ ಜಿಎಸ್ ಆರ್ ನೊಟಿಫಿಕೇಷನ್ ನ್ನು ಅನುಮೋದಿಸಿದ್ದೇನೆ. ಈ ಮೂಲಕ ರಫ್ತು ಯೋಗ್ಯ ಕಾರುಗಳ ಉತ್ಪಾದನೆಯನ್ನೂ ಉತ್ತೇಜಿಸಲಾಗುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.