ಆದರೆ, ಈ ವಿಚಾರವನ್ನು ತಮಿಳುನಾಡು ಪೊಲೀಸ್ ಇಲಾಖೆ ಅಲ್ಲಗೆಳೆದಿದೆ. ಈ ಬಗ್ಗೆ ಶೈಲೇಂದ್ರ ಬಾಬು ಮಾಧ್ಯಮದ ಜತೆ ಮಾತನಾಡಿದ್ದು, ಇತ್ತೀಚೆಗೆ ರಾಮೇಶ್ವರಂನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉಲ್ಲೇಖಿಸಿ, ಉದ್ಯೋಗದಾತರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಉದ್ಯೋಗದಾತರು ತಾವು ಕೆಲಸ ನೀಡುವ ಕಾರ್ಮಿಕರ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಇತ್ತೀಚಿಗೆ 45 ವರ್ಷದ ಮೀನುಗಾರ ಮಹಿಳೆಯ ಮೇಲೆ ಒಡಿಶಾ ಮೂಲದ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಆರೋಪಿಗಳು ಆ ವಲಯದಲ್ಲಿ ಸಿಗಡಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ವಲಸೆ ಕಾರ್ಮಿಕರು ಕೃತ್ಯದಲ್ಲಿ ಭಾಗಿಯಾಗಿರುವ ಆರೋಪ ಹಿನ್ನೆಲೆಯಲ್ಲಿ ಕಾರ್ಮಿಕರ ಮಾಹಿತಿ ಸಂಗ್ರಹಿಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಶೈಲೇಂದ್ರ ಬಾಬು ತಿಳಿಸಿದರು.
ವೈರಲ್ ಆಗಿರುವ ವಾಟ್ಸ್ಆಯಪ್ ಸಂದೇಶ ನೋಡಿ ನೀವು ಅಂದುಕೊಂಡಿರುವಂತೆ ಅಂಥದ್ದೇನೂ ಇಲ್ಲ. ಕಾರ್ಮಿಕರ ಇತಿಹಾಸ ಅಥವಾ ಹಿನ್ನೆಲೆಯನ್ನು ತಿಳಿದುಕೊಳ್ಳಲು ಉದ್ಯೋಗದಾತರಿಗೆ ವ್ಯಕ್ತಿತ್ವ ಪರಿಶೀಲನಾ ಸೌಲಭ್ಯ ಅಥವಾ ಕಾವಲನ್ ಆಯಪ್ ಬಳಸಲು ನಾವು ವಿನಂತಿಸಿದ್ದೇವೆ. ಉದಾಹರಣೆಗೆ ಉದ್ಯೋಗ ಮಾಡಲು ಬಯಸಿರುವ ವ್ಯಕ್ತಿಗೆ ಉದ್ಯೋಗ ನೀಡುವ ಮುನ್ನ ಆತನ ಕೇಸ್ ಹಿಸ್ಟರಿಯನ್ನು ತಿಳಿದುಕೊಳ್ಳಲು ಹೇಳಲಾಗಿದೆ ಎಂದು ಡಿಜಿಪಿ ಬಾಬು ಮಾಹಿತಿ ನೀಡಿದರು.
ಅತ್ಯಾಚಾರ ಮತ್ತು ಕೊಲೆ ಘಟನೆಯ ನಂತರ ರಾಮನಾಥಪುರಂ ಜಿಲ್ಲೆಯ 18 ಪಂಚಾಯಿತಿಗಳಿಗೆ ಪೊಲೀಸ್ ಇಲಾಖೆ ಸುತ್ತೋಲೆ ಹೊರಡಿಸಿರುವುದು ವರದಿಯಾಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರು, ಇಂಜಿನಿಯರಿಂಗ್, ಹೋಟೆಲ್‌ಗಳು, ಹಾಸ್ಟೆಲ್‌ಗಳು ಹಾಗೂ ಸಿಗಡಿ ಉದ್ಯಮದಲ್ಲಿ ಕೆಲಸ ಮಾಡುವ ಇತರ ರಾಜ್ಯಗಳ ಜನರು ಮತ್ತು ಪಾನಿ ಪುರಿ ಮತ್ತು ಕುಲ್ಫಿ ಮಾರಾಟಗಾರರಾಗಿ ಕೆಲಸ ಮಾಡುವವರು ಈ ಕೆಳಗಿನ ವಿವರಗಳನ್ನು ಜೂನ್ 15 ರ ಒಳಗೆ ಪಂಚಾಯತ್ ಕಚೇರಿಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದೇಶದ ಪ್ರಕಾರ ಹೆಸರು, ವಯಸ್ಸು, ಫೋಟೋ, ಆಧಾರ್ ಕಾರ್ಡ್, ಫೋನ್ ನಂಬರ್, ಪ್ರಸ್ತುತ ಉದ್ಯೋಗದಾತ ಮತ್ತು ಪ್ರಸ್ತುತ ವಿಳಾಸದ ಮಾಹಿತಿಯನ್ನು ನೀಡಬೇಕು. ಇಂತಹ ಸುತ್ತೋಲೆಗಳನ್ನು ರಾಮೇಶ್ವರಂ, ತಂಗಚಿಮಾಡಂ, ಪಾಂಬನ್, ಪನೈಕುಡಂ, ಪುದುಮಡಂ ಮತ್ತು ಕಿಜಕರೈ ಪಂಚಾಯತ್‌ಗಳು ಹೊರಡಿಸಿವೆ.