ಪಾಟ್ನಾ: ಸರ್ಕಾರಿ ಆಸ್ಪತ್ರೆಯಿಂದ ಮಗನ ಮೃತದೇಹ ಪಡೆಯಲು ಹಣ ನೀಡಬೇಕಾದ ಕಾರಣ ತಂದೆ-ತಾಯಿ ಭಿಕ್ಷೆ ಬೇಡುತ್ತಿರುವ ಹೃದಯ ವಿದ್ರಾವಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೃತ ಮಗನನ್ನು ಸಂಜೀವ್ ಠಾಕೂರ್ ಎಂದು ಗುರುತಿಸಲಾಗಿದೆ. ತಂದೆ ಮಹೇಶ್ ಠಾಕೂರ್ ಅವರ ಪುತ್ರ ಸಂಜೀವ್ ಠಾಕೂರ್ ಮಾನಸಿಕ ಅಸ್ವಸ್ಥನಾಗಿದ್ದು, ಮೇ 25 ರಂದು ತಾಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆಹಾರ್ ಗ್ರಾಮದಿಂದ ನಾಪತ್ತೆಯಾಗಿದ್ದರು.
ಆಸ್ಪತ್ರೆಯ ಮರಣೋತ್ತರ ವಿಭಾಗದ ಸಿಬ್ಬಂದಿ ನಾಗೇಂದ್ರ ಮಲ್ಲಿಕ್ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಜೂನ್ 7 ರಂದು, ಕುಟುಂಬವು ಅವರ ಶವವನ್ನು ಗುರುತಿಸಲು ಹೋದಾಗ, ಶವವನ್ನು ಹಸ್ತಾಂತರಿಸಲು ನಿರಾಕರಿಸಿ ರೂ 50,000ಕ್ಕೆ ಕೇಳಿದ್ದರು ಎಂದು ತಿಳಿದು ಬಂದಿದೆ.
ಬಿಹಾರದ ದಂಪತಿಗಳು ತಮ್ಮ ಮಗನ ಶವವನ್ನು ಪಡೆದುಕೊಳ್ಳಲು ಸರ್ಕಾರಿ ಆಸ್ಪತ್ರೆಗೆ 50,000 ರೂ. ಲಂಚ ನೀಡಬೇಕಾಗಿತ್ತು. ಆದ ಕಾರಣ ತಂದೆ ತಾಯಿ ಭಿಕ್ಷೆ ಬೇಡುತ್ತಿದ್ದರು ಎಂದು ತಿಳಿದು ಬಂದಿದೆ.
ಆಸ್ಪತ್ರೆ ಸಿಬ್ಬಂದಿ ಹಣ ಕೇಳಬಹುದು, ಆದರೆ 50,000 ರೂ.ಗೆ ಬೇಡಿಕೆ ಇಡುವಂತಿಲ್ಲ ಎಂದು ಸಮಸ್ತಿಪುರ ಸಿವಿಲ್ ಸರ್ಜನ್ ಡಾ.ಎಸ್.ಕೆ.ಚೌಧರಿ ಹೇಳಿದ್ದಾರೆ. ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಆಸ್ಪತ್ರೆ ಸಿಬ್ಬಂದಿ ಹಣ ಕೇಳಿಲ್ಲ ಎಂದು ಹೇಳಿದ್ದಾರೆ.
“ಹಿಂದೆಯೂ ಹಣ ಕೇಳಿದ ಘಟನೆಗಳು ನಡೆದಿವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ತನಿಖೆ ನಡೆಸಲು ತಂಡ ರಚಿಸಿದ್ದೇವೆ ಎಂದು ಚೌಧರಿ ಹೇಳಿದ್ದಾರೆ.
ವೀಡಿಯೊ ವೈರಲ್ ಆದ ಕೆಲವೇ ದಿನಗಳಲ್ಲಿ, ಸಮಸ್ತಿಪುರ್ ಸದರ್ ಆಸ್ಪತ್ರೆಯ ಆಡಳಿತ, ಭದ್ರತಾ ಸಿಬ್ಬಂದಿ ಜೊತೆಗೆ ಶವವನ್ನು ಮಹೇಶ್ ಠಾಕೂರ್ ಅವರ ಮನೆಗೆ ಕಳುಹಿಸಿದೆ.