ಚಂಡೀಗಢ: ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯಲ್ಲಿ ತನ್ನ ಗ್ಯಾಂಗ್ ಪಾತ್ರವಿದೆ ಎಂದು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ವಿಚಾರಣಾಧಿಕಾರಿಗಳಿಗೆ ಹೇಳಿದರೂ, ಆತನ ಸೋದರಳಿಯ ಸಚಿನ್ ಬಿಷ್ಣೋಯ್, ಪಂಜಾಬಿ ಗಾಯಕ ಕಮ್ ರಾಜಕಾರಣಿಯ ಹತ್ಯೆಯ ಹೊಣೆ ಹೊತ್ತಿಕೊಂಡಿದ್ದಾನೆ.
ಪಂಜಾಬ್ ಸರ್ಕಾರ ಭದ್ರತೆ ಹಿಂಪಡೆದ ಬೆನ್ನಲ್ಲೇ ಮೇ 29 ರಂದು ಮಾನ್ಸಾ ಬಳಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ 28 ವರ್ಷದ ಸಿಧು ಮೂಸೆವಾಲ ಅವರನ್ನು ಹತ್ಯೆ ಮಾಡಿದ್ದರು.
ಸದ್ಯ ದೆಹಲಿಯ ವಿಶೇಷ ಪೊಲೀಸ್ ಘಟಕದ ವಶದಲ್ಲಿರುವ ಲಾರೆನ್ಸ್ ಬಿಷ್ಣೋಯ್, ಕಳೆದ ವರ್ಷ ನಡೆದಿದ್ದ ಅಕಾಲಿ ದಳ ಯುವ ಮುಖಂಡ ವಿಕ್ರಮ್ ಜಿತ್ ಸಿಂಗ್ ಆಲಿಯಾಸ್ ವಿಕಿ ಮುದುಕೇರಾ ಹತ್ಯೆಯಲ್ಲಿ ಮೂಸೆವಾಲ ಪಾತ್ರವಿತ್ತು. ಇದರಿಂದಾಗಿ ಪಂಜಾಬಿ ಗಾಯಕ ತನ್ನ ನಡುವೆ ದ್ವೇಷವಿತ್ತು ಎಂದು ಹೇಳಿದ್ದಾನೆ.
ಅಲ್ಲದೇ, ಕೆನಡಾ ಮೂಲದ ಗಾಲ್ಡಿ ಬ್ರಾರ್ ಸೇರಿದಂತೆ ತನ್ನ ಗ್ಯಾಂಗ್ ಸದಸ್ಯರು ಸಂಚು ನಡೆಸಿ, ಸಿಧು ಮೂಸೆವಾಲ ಹತ್ಯೆ ಮಾಡಿರುವುದಾಗಿ ಬಿಷ್ಮೋಯ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.
ಈ ಮಧ್ಯೆ, ಸಿಧು ಮೂಸೆವಾಲ ಹತ್ಯೆಯ ಹೊಣೆ ಹೊತ್ತಿಕೊಂಡಿರುವ ಸಚಿನ್ ಬಿಷ್ಣೋಯ್, ಇದು ಪ್ರತಿಕಾರದ ಕೃತ್ಯ ಎಂದು ಹೇಳಿಕೊಂಡಿದ್ದಾನೆ. ನ್ಯೂಸ್ ಚಾನೆಲ್ ಗಳೊಂದಿಗೆ ವರ್ಚುಯಲ್ ಕರೆ ಮಾಡಿರುವ ಸಚಿನ್ ಬಿಷ್ಣೋಯ್, ತನ್ನ ಸ್ವಂತ ಕೈಗಳಿಂದ ಸಿಧು ಹತ್ಯೆ ಮಾಡಿರುವುದಾಗಿ ಹೇಳಿದ್ದಾನೆ.