ನವದೆಹಲಿ :ಪ್ರವಾದಿ ಮುಹಮ್ಮದ್‌ರ ಕುರಿತು ಬಿಜೆಪಿಯ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರ ನಿಂದನಾತ್ಮಕ ಹೇಳಿಕೆಗಳ ಕುರಿತು ಆಕ್ರೋಶಗಳ ನಡುವೆಯೇ ರವಿವಾರ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು, ದೇಶದಲ್ಲಿ ದ್ವೇಷ ಹರಡುವಿಕೆ ಮತ್ತು ಇಸ್ಲಾಮೋಫೋಬಿಕ್ ಘಟನೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ತನ್ನ ಮೌನವನ್ನು ಮುರಿಯಲು ಇದು ಸಕಾಲವಾಗಿದೆ ಎಂದು ಹೇಳಿದರು.
ಪ್ರಧಾನಿಯ ಮೌನವನ್ನು ದೇಶದಲ್ಲಿ ಸಂಭವಿಸುತ್ತಿರುವುದನ್ನು ಅವರು ಕಡೆಗಣಿಸುತ್ತಿದ್ದಾರೆ ಎಂದು ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ ಎಂದು ತರೂರ್ ಒತ್ತಿ ಹೇಳಿದರು.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತರೂರ್, ವಿಪರ್ಯಾಸವೆಂದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ಸರಕಾರವು ಇಸ್ಲಾಮಿಕ್ ದೇಶಗಳೊಂದಿಗೆ ಬಾಂಧವ್ಯಗಳನ್ನು ಹೆಚ್ಚಿಸಿಕೊಳ್ಳಲು ಪ್ರಭಾವಿ ಕ್ರಮಗಳನ್ನು ತೆಗೆದುಕೊಂಡಿದೆ, ಆದರೆ ಅವು ಗಂಭೀರವಾಗಿ ದುರ್ಬಲಗೊಳ್ಳುವ ಅಪಾಯವಿದೆ ಎಂದು ಹೇಳಿದರು.
'ಬಿಜೆಪಿ ನಾಯಕರ ಇಂತಹ ವಿಭಜಕ ವಾಕ್ಚಾತುರ್ಯವು ಭಾರತದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ತನ್ನ ಸ್ವಂತ ದೃಷ್ಟಿಕೋನವನ್ನು ದುರ್ಬಲಗೊಳಿಸುತ್ತದೆ ಎನ್ನುವುದನ್ನು ಮೋದಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನನಗೆ ಖಚಿತವಿದೆ 'ಎಂದರು. ಯಾವುದೇ ದೇಶವು ಪ್ರಗತಿಯಾಗಲು ಮತ್ತು ಬೆಳೆಯಲು ಸಾಮಾಜಿಕ ಒಗ್ಗಟ್ಟು ಮತ್ತು ರಾಷ್ಟ್ರೀಯ ಸಾಮರಸ್ಯ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ತರೂರ್,ಅದಕ್ಕಾಗಿಯೇ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್'ಹೆಸರಿನಲ್ಲಿ ಮೋದಿಯವರು ಇಂತಹ ನಡವಳಿಕೆಯನ್ನು ನಿಲ್ಲಿಸುವಂತೆ ಬಹಿರಂಗ ಕರೆಯನ್ನು ನೀಡಬೇಕು ಎಂದರು.
ದೇಶದಲ್ಲಿ ದೈವನಿಂದೆ ಕಾನೂನುಗಳ ಅಗತ್ಯದ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ಪ್ರಸ್ತಾಪಿಸಿದ ತರೂರ್, 'ಬೇರೆ ಕಡೆಗಳಲ್ಲಿ ಇಂತಹ ಕಾನೂನುಗಳ ಇತಿಹಾಸವು ಅವುಗಳ ದುರುಪಯೋಗದಿಂದ ತುಂಬಿಹೋಗಿವೆ, ಹೀಗಾಗಿ ತಾನು ಇಂತಹ ಕಾನೂನುಗಳ ಬಗ್ಗೆ ಒಲವು ಹೊಂದಿಲ್ಲ. ಇಂತಹ ದುರ್ವರ್ತನೆಗಳನ್ನು ಎದುರಿಸಲು ನಮ್ಮ ಈಗಿನ ದ್ವೇಷಭಾಷಣ ಕಾನೂನುಗಳು ಮತ್ತು ಐಪಿಸಿಯ ಕಲಂ 295 ಸಾಕು ಎಂದು ನಾನು ಭಾವಿಸಿದ್ದೇನೆ' ಎಂದು ಹೇಳಿದರು.