ಹವಾಮಾನ ವೈಪರೀತ್ಯದಿಂದ ಸಿಡಿಲು- ಗುಡುಗುಗಳ ತೀವ್ರತೆ ಮತ್ತು ಆವರ್ತನ ಹೆಚ್ಚಲಿರುವ ಹಿನ್ನೆಲೆಯಲ್ಲಿ ಮುಂದೆ ಸಹ ವ್ಯಾಪಕ ಸಾವು-ನೋವು ಸಂಭವಿಸಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಸಿಡಿಲು ಸಂಬಂಧಿ ಸುರಕ್ಷತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗೆಗೆ ಜಾಗೃತಿ ಮೂಡಿಸುವ ಕಾರ್ಯವೂ ವ್ಯಾಪಕವಾಗಿ ಆಗಬೇಕಾಗಿದೆ.
ಭಾರತದಲ್ಲಿ ಪ್ರತಿವರ್ಷ ಸರಾಸರಿ 2,000ದಿಂದ 2,500 ಜನರು ಸಿಡಿಲಿನಿಂದಾಗಿ ಸಾವನ್ನಪ್ಪುತ್ತಾರೆ. ನೈಸರ್ಗಿಕ ಕಾರಣಗಳಿಂದ ಸಂಭವಿಸುವ ಸಾವುಗಳಿಗೆ ಹೆಚ್ಚು ಕಾರಣವಾಗುವುದು ಸಿಡಿಲು. ದೇಶದಲ್ಲಿ 1967ರಿಂದ 2012ರವರೆಗೆ ನೈಸರ್ಗಿಕ ವಿಕೋಪಗಳಿಂದ ಸಂಭವಿಸಿದ ಸಾವುಗಳ ಪೈಕಿ ಸಿಡಿಲಿನಿಂದಲೇ ಶೇ. 39ರಷ್ಟು ಉಂಟಾಗಿವೆ. ಅಲ್ಲದೆ, ಇದರಿಂದ ಸಾವಿರಾರು ಪ್ರಾಣಿಗಳು ಬಲಿಯಾಗುತ್ತಿವೆ. ವಿದ್ಯುತ್ ವ್ಯತ್ಯಯ ಹಾಗೂ ಕಾಡ್ಗಿಚ್ಚಿನಂತಹ ಘಟನೆಗಳು ಹೆಚ್ಚಿವೆ. ಕೆಲವು ವರ್ಷಗಳ ಹಿಂದೆ, ಕೇವಲ ಮೂರು ದಿನಗಳಲ್ಲಿ 300ಕ್ಕೂ ಹೆಚ್ಚು ಜನರು ಸಿಡಿಲಿನಿಂದಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿ ಎಲ್ಲರನ್ನೂ ಆಘಾತಕ್ಕೀಡುಮಾಡಿತ್ತು.
ದೇಶದ ಈಶಾನ್ಯ ಹಾಗೂ ಪೂರ್ವ ಭಾಗದ ಪ್ರದೇಶಗಳಲ್ಲಿ ಗುಡುಗು ಮತ್ತು ಸಿಡಿಲಿನಿಂದ ಹೆಚ್ಚು ಅನಾಹುತಗಳು ಸಂಭವಿಸುತ್ತಿವೆ. ಹಿಮಾಲಯದ ತಪ್ಪಲಿನಲ್ಲಿ ಸಿಡಿಲು ಹೊಡೆಯುವ ಪ್ರಕರಣಗಳು ಹೆಚ್ಚುತ್ತಿರುವ ಪ್ರವೃತ್ತಿಯನ್ನು ಕಳೆದ 20 ವರ್ಷಗಳಿಂದ ಗುರುತಿಸಲಾಗುತ್ತಿದೆ ಎಂದು ಐಐಟಿಎಂನ ಡಾ. ಸುನೀಲ್ ಪವಾರ್ ಹೇಳುತ್ತಾರೆ. ಸಾರಿಗೆ, ವಿದ್ಯುತ್, ಸಂವಹನ, ಕೃಷಿ ಹಾಗೂ ವಾಯುಯಾನ ಕ್ಷೇತ್ರಗಳ ಮೇಲೆ ಸಿಡಿಲುಗಳು ಪರಿಣಾಮ ಬೀರುತ್ತವೆ. ಜಮೀನುಗಳಲ್ಲಿ ಕೃಷಿ ಮಾಡುತ್ತಿರುವ ಹೆಚ್ಚಿನ ಜನರು ಸಿಡಿಲಿಗೆ ಬಲಿಯಾಗಿರುವುದು ಅಧ್ಯಯನದಲ್ಲಿ ದೃಢಪಟ್ಟಿದೆ. ಪೂರ್ವ ಮುಂಗಾರು ಹಾಗೂ ಚಂಡಮಾರುತ ಸಂದರ್ಭದಲ್ಲಿ ಹೆಚ್ಚು ಗುಡುಗು-ಮಿಂಚು ಸಂಭವಿಸುತ್ತವೆ. ಹೀಗಿದ್ದರೂ, ಭಾರತದಲ್ಲಿ ನಿಸರ್ಗದ ವಾತಾವರಣಕ್ಕೆ ಸಂಬಂಧಿಸಿದಂತೆ ಅತಿ ಕಡಿಮೆ ಅಧ್ಯಯನ ಮಾಡಿದ ವಿಷಯಗಳಲ್ಲಿ ಸಿಡಿಲು ಒಂದಾಗಿದೆ. ಪುಣೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಫಿಕಲ್ ಮ್ಯಾನೇಜ್ವೆುಂಟ್ನಲ್ಲಿರುವ (ಐಐಟಿಎಂ) ವಿಜ್ಞಾನಿಗಳ ಗುಂಪೊಂದು ಮಾತ್ರ ಗುಡುಗು ಮತ್ತು ಸಿಡಿಲಿಗೆ ಸಂಬಂಧಿಸಿದಂತೆ ಪೂರ್ಣಾವಧಿ ಕೆಲಸ ಮಾಡುತ್ತದೆ. ಸಿಡಿಲು ಸಂಬಂಧಿ ಸುರಕ್ಷತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗೆಗೂ ಹೆಚ್ಚಿನ ಜಾಗೃತಿ ಹಾಗೂ ಪ್ರಚಾರ ನಡೆಯುತ್ತಿಲ್ಲ.
ಸಿಡಿಲು ಹೇಗೆ ಬಡಿಯುತ್ತದೆ?
ವಾತಾವರಣದಲ್ಲಿ ವಿದ್ಯುಚ್ಛಕ್ತಿಯನ್ನು ಅತ್ಯಂತ ವೇಗವಾಗಿ ಮತ್ತು ಬೃಹತ್ ಪ್ರಮಾಣದಲ್ಲಿ ಹೊರಸೂಸುವ ಪ್ರಕ್ರಿಯೆಯೇ ಸಿಡಿಲು. ಇದರಲ್ಲಿ ಕೆಲವು ಭೂಮಿಯ ಮೇಲ್ಮೆ ೖಗೆ ಅಪ್ಪಳಿಸುತ್ತವೆ. ಇವು 10-12 ಕಿಮೀ ಎತ್ತರದಷ್ಟು ಬೃಹತ್ ಗಾತ್ರದ, ತೇವಾಂಶ ಹೊಂದಿರುವ ಮೋಡಗಳಲ್ಲಿ ಉತ್ಪತ್ತಿಯಾಗುತ್ತವೆ. ಈ ಮೋಡಗಳ ತಳವು ಸಾಮಾನ್ಯವಾಗಿ ಭೂಮಿಯ ಮೇಲ್ಮೈಯಿಂದ 1-2 ಕಿಮೀ ಒಳಗೆ ಇರುತ್ತದೆ. ಆದರೆ, ಅವುಗಳ ಮೇಲ್ಭಾಗವು 12-13 ಕಿಮೀ ದೂರದಲ್ಲಿರುತ್ತವೆ. ಈ ಮೋಡಗಳ ಮೇಲ್ಭಾಗದಲ್ಲಿ ತಾಪಮಾನವು ಮೈನಸ್ 35ರಿಂದ ಮೈನಸ್ 45 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ. ಮೋಡದಲ್ಲಿನ ನೀರಿನ ಆವಿಯು ಮೇಲ್ಮುಖವಾಗಿ ಚಲಿಸುವಾಗ, ತಾಪಮಾನವು ಕುಸಿತವಾಗಿ ಘನೀಕರಣಕ್ಕೆ ಕಾರಣವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಶಾಖವು ಉತ್ಪತ್ತಿಯಾಗುತ್ತದೆ. ಇದು ನೀರಿನ ಅಣುಗಳನ್ನು ಮತ್ತಷ್ಟು ಮೇಲಕ್ಕೆ ತಳ್ಳುತ್ತದೆ. ಶೂನ್ಯ ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನದಲ್ಲಿ ಚಲಿಸುವಾಗ ಈ ನೀರಿನ ಹನಿಗಳು ಮಂಜಿನ ಸಣ್ಣ ಸ್ಪಟಿಕಗಳಾಗಿ ಬದಲಾಗುತ್ತವೆ. ಇವು ಮೇಲಕ್ಕೆ ಚಲಿಸುವುದನ್ನು ಮುಂದುವರಿಸುತ್ತಾ, ಇನ್ನಷ್ಟು ದ್ರವ್ಯರಾಶಿ ಪಡೆದುಕೊಳ್ಳುತ್ತವೆ. ಮತ್ತೆ ಮೇಲಕ್ಕೆ ಏರಲಾರದಷ್ಟು ಭಾರವಾದಾಗ, ಭೂಮಿಗೆ ಬೀಳಲು ಪ್ರಾರಂಭಿಸುತ್ತವೆ. ಈ ಹಂತದಲ್ಲಿ, ಸಣ್ಣ ಸ್ಪಟಿಕಗಳು ಮೇಲಕ್ಕೆ ಚಲಿಸಿದರೆ, ದೊಡ್ಡ ಸ್ಪಟಿಕಗಳು ಕೆಳಗೆ ಬರತೊಡಗುತ್ತವೆ. ಇದರಿಂದಾಗಿ ಘರ್ಷಣೆ ಸಂಭವಿಸಿ, ಎಲೆಕ್ಟ್ರಾನ್ಗಳು ಬಿಡುಗಡೆಗೊಳ್ಳುತ್ತವೆ. ಈ ರೀತಿ ಚಲಿಸುವ ಮುಕ್ತ ಎಲೆಕ್ಟ್ರಾನ್ಗಳಿಂದ ಇನ್ನಷ್ಟು ಘರ್ಷಣೆ ಉಂಟಾಗಿ ಮತ್ತಷ್ಟು ಎಲೆಕ್ಟ್ರಾನ್ಗಳು ಉತ್ಪಾದನೆಯಾಗುತ್ತವೆ. ಈ ರೀತಿ ಎಲೆಕ್ಟ್ರಾನ್ಗಳು ಉತ್ಪಾದನೆಯಾಗುವ ಸರಪಳಿ ಕ್ರಿಯೆ ಉಂಟಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಮೋಡದ ಮೇಲಿನ ಪದರವು ಧನಾತ್ಮಕವಾಗಿ ಚಾರ್ಜ್ ಆದರೆ, ಮಧ್ಯದ ಪದರವು ಋಣಾತ್ಮಕವಾಗಿ ಚಾರ್ಜ್ ಆಗುತ್ತದೆ. ಈ ಎರಡೂ ಪದರಗಳ ನಡುವಿನ ವಿದ್ಯುತ್ ವ್ಯತ್ಯಾಸವು ಬೃಹತ್ ಪ್ರಮಾಣದಲ್ಲಿದ್ದು, ಶತಕೋಟಿಯಿಂದ ಸಾವಿರ ಕೋಟಿ ವೋಲ್ಟ್ ಗಳಷ್ಟು ಆಗಿರುತ್ತದೆ. ಬಹಳ ಕಡಿಮೆ ಸಮಯದಲ್ಲಿ, ಒಂದು ಲಕ್ಷದಿಂದ ಹತ್ತು ಲಕ್ಷ ಆಂಪಿಯರ್ಗಳಷ್ಟು ಬೃಹತ್ ಪ್ರಮಾಣದ ವಿದ್ಯುತ್ ಪ್ರವಾಹವು ಈ ಎರಡೂ ಪದರಗಳ ನಡುವೆ ಹರಿಯಲು ಪ್ರಾರಂಭಿಸುತ್ತದೆ. ಆಗ, ಅಗಾಧ ಪ್ರಮಾಣದ ಶಾಖ ಉತ್ಪತ್ತಿಯಾಗಿ ಮೋಡದ ಎರಡು ಪದರಗಳ ನಡುವಿನ ಗಾಳಿಕಂಬಗಳು ಬಿಸಿಯಾಗತೊಡಗುತ್ತವೆ. ಈ ಬಿಸಿಯಾದ ಗಾಳಿಕಂಬಗಳು ವಿಸ್ತರಿಸಿದಂತೆ, ಆಘಾತಕಾರಿ ತರಂಗಗಳನ್ನು ಉತ್ಪಾದಿಸಿ ಸಿಡಿಲಿಗೆ ಕಾರಣವಾಗುತ್ತದೆ.
ಮೋಡದಿಂದ ಭೂಮಿಯನ್ನು ಹೇಗೆ ತಲುಪುತ್ತವೆ?
ಭೂಮಿಯು ಉತ್ತಮ ವಿದ್ಯುತ್ ವಾಹಕವಾಗಿದ್ದರೂ, ವಿದ್ಯುತ್ ಪ್ರವಹಿಸುವಲ್ಲಿ ಅದು ತಟಸ್ಥವಾಗಿರುತ್ತದೆ. ಆದರೂ ಮೋಡದ ಮಧ್ಯದ ಪದರಕ್ಕೆ ಹೋಲಿಸಿದರೆ, ಭೂಮಿಯು ಧನಾತ್ಮಕವಾಗಿ ಚಾರ್ಜ್ ಆಗುತ್ತದೆ. ಪರಿಣಾಮವಾಗಿ, ಶೇ 15ರಿಂದ ಶೇ 20ರಷ್ಟು ಪ್ರವಾಹವು ಭೂಮಿಯ ಕಡೆಗೆ ಹರಿದುಬರುತ್ತದೆ. ಈ ಪ್ರವಾಹದ ಹರಿವು ಭೂಮಿಯ ಮೇಲಿನ ಜೀವ ಮತ್ತು ಆಸ್ತಿಗೆ ಹಾನಿಯುಂಟು ಮಾಡುತ್ತದೆ. ಮರಗಳು, ಗೋಪುರಗಳು ಅಥವಾ ಬೃಹತ್ ಕಟ್ಟಡಗಳಂತಹ ಎತ್ತರದ ವಸ್ತುಗಳಿಗೆ ಸಿಡಿಲು ಹೊಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.
ರಾಜ್ಯದಲ್ಲಿ ವಾರ್ಷಿಕವಾಗಿ ನೂರು ಮಂದಿ ಬಲಿ
| ಹರೀಶ್ ಬೇಲೂರು ಬೆಂಗಳೂರು
2011-12ರಿಂದ 2021-22ವರೆಗೆ ರಾಜ್ಯದಲ್ಲಿ ಸಿಡಿಲು ಬಡಿದು 812 ಮಂದಿ ಮೃತಪಟ್ಟಿದ್ದಾರೆ. ಪ್ರತಿ ವರ್ಷ ಸಿಡಿಲಿನಿಂದ ರಾಜ್ಯದಲ್ಲಿ ಸರಾಸರಿ 100 ಜನ ಪ್ರಾಣಕಳೆದುಕೊಳ್ಳುತ್ತಿದ್ದಾರೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೇ ಸಿಡಿಲಿನಿಂದ ಹೆಚ್ಚು ಜನ ಸಾವನ್ನಪ್ಪಿರುವುದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗವಾಗಿದೆ.
ಬೆಳಗಾವಿಯಲ್ಲಿ ಹೆಚ್ಚು ಸಾವು: 10 ವರ್ಷಗಳಲ್ಲಿ ಸಿಡಿಲಿನಿಂದ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಬೆಳಗಾವಿಯಲ್ಲಿ ಅತಿ ಹೆಚ್ಚು 85 ಮಂದಿ ಸಾವನ್ನಪ್ಪಿ ದ್ದಾರೆ. ವಿಜಯಪುರ 69, ಗದಗ 56, ಚಿತ್ರದುರ್ಗ 48, ತುಮಕೂರು 48, ಬೀದರ 44, ಕೊಪ್ಪಳ 43, ಹಾವೇರಿ 43, ಯಾದಗಿರಿ 37, ಧಾರವಾಡ 37, ಬಳ್ಳಾರಿ 35, ಮೈಸೂರು 32, ಬಾಗಲಕೋಟೆ 31, ರಾಯಚೂರು 29, ಶಿವಮೊಗ್ಗ 27, ಚಾಮರಾಜನಗರ 27, ದಾವಣಗೆರೆ 24, ಚಿಕ್ಕಮಗಳೂರು 16, ಉಡುಪಿ 14, ಉತ್ತರ ಕನ್ನಡ 12, ದಕ್ಷಿಣ ಕನ್ನಡ 11, ಮಂಡ್ಯ 11, ವಿಜಯನಗರ 10, ಕಲಬುರಗಿ 07, ಚಿಕ್ಕಬಳ್ಳಾಪುರ 06, ಹಾಸನ 06, ಬೆಂಗಳೂರು 02, ಬೆಂ.ಗ್ರಾಮಾಂತರ 01, ಕೋಲಾರ 01 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೊಡಗು ಹಾಗೂ ರಾಮನಗರದಲ್ಲಿ ಸಾವು- ನೋವು ಸಂಭವಿಸಿಲ್ಲ.
ಆಗಸದಲ್ಲಿ ಧೂಳಿನ ಕಣಗಳು ಮತ್ತು ಜ್ವಾಲಾಮುಖಿಯಿಂದ ಹೊರಬಂದಿರುವ ಬೂದಿಯ ಕಣಗಳು ಬಿಸಿಯಾಗಿರುತ್ತವೆ. ಈ ವೇಳೆ ಮಳೆ ಪ್ರಾರಂಭವಾದರೆ ಸಿಡಿಲು ಮತ್ತು ಗುಡುಗು ಸಂಭವಿಸುತ್ತದೆ. ಮುಂಗಾರಿನ ಆರಂಭ ದಿನಗಳಲ್ಲಿ ಇದು ಹೆಚ್ಚಿರುತ್ತದೆ. ಇದರ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು.
| ಡಾ.ಎಚ್ಎಸ್ಎಂ ಪ್ರಕಾಶ್ ಹವಾಮಾನ ತಜ್ಞ
ಪಾಲಿಸಬೇಕಾದ ಮುನ್ನೆಚ್ಚರಿಕೆಗಳು
- ವಿದ್ಯುತ್ ಉಪಕರಣ, ಮೊಬೈಲ್ ಬಳಸಬಾರದು
- ಹಗ್ಗ, ಕೊಳಾಯಿ, ಪೈಪ್ಗಳಿಂದ ದೂರವಿರಬೇಕು
- ಕೈಗಳನ್ನು ತೊಳೆಯಬಾರದು, ಸ್ನಾನ ಮಾಡಬಾರದು
- ಪಾತ್ರೆ ತೊಳೆಯಬಾರದು
- ವಿದ್ಯುತ್ ಸಂಪರ್ಕ ಕಲ್ಪಿಸುವ ಮನೆಯ ಮೇನ್ ಸ್ವಿಚ್ ಆಫ್ ಮಾಡಬೇಕು
- ಗುಡುಗು ಮಿಂಚು ಸಂದರ್ಭದಲ್ಲಿ ಹೊರಗೆ ಹೋಗಬಾರದು, ಪ್ರವಾಸ ಮಾಡಬಾರದು
- ಲೋಹ ವಸ್ತುಗಳಿಂದ, ಕಿಟಕಿ ಮತ್ತು ಬಾಗಿಲುಗಳಿಂದ ದೂರವಿರಬೇಕು
- ಕಾಂಕ್ರೀಟ್ ಮಹಡಿಗಳ ಮೇಲೆ ಮಲಗಬಾರದು
- ಗಟ್ಟಿಮುಟ್ಟಾದ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು
- ತಕ್ಷಣ ಸುರಕ್ಷತಾ ಸ್ಥಳಗಳಿಗೆ ತೆರಳಿ ರಕ್ಷಣೆ ಪಡೆಯಬೇಕು
- ಯಾರಿಗಾದರೂ ಸಿಡಿಲು ಬಡಿದರೆ ತಕ್ಷಣ ವೈದ್ಯಕೀಯ ಸಹಾಯಕ್ಕಾಗಿ ಕರೆ ಮಾಡಬೇಕು
- ಕಾರು, ಬೈಕ್ನಲ್ಲಿ ಪ್ರವಾಸ ಹೋದ ಸಂದರ್ಭದಲ್ಲಿ ಸಿಡಿಲು ಸಂಭವಿಸಿದರೆ ತಕ್ಷಣ ಸುರಕ್ಷತಾ ಸ್ಥಳಗಳಿಗೆ ತೆರಳಬೇಕು
- ಎಲೆಕ್ಟ್ರಾನಿಕ್ ವಸ್ತುಗಳನ್ನು ಮುಟ್ಟಬಾರದು
- ಮರದ ಕೆಳಗೆ ನಿಂತುಕೊಳ್ಳಬಾರದು