ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರ ಬದಲು ಮುಖ್ಯಮಂತ್ರಿಗಳನ್ನು ಕುಲಪತಿಯನ್ನಾಗಿ ನೇಮಕ ಮಾಡುವ ಮಸೂದೆಯನ್ನು ಸೋಮವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
ಮಸೂದೆಯ ವಿರುದ್ಧ ಬಿಜೆಪಿ ಶಾಸಕರು ಪ್ರತಿಭಟಿಸಿದರೂ ಮಸೂದೆ ಪರವಾಗಿ 182 ಮತಗಳು ಹಾಗೂ ವಿರುದ್ಧವಾಗಿ ಕೇವಲ 40 ಮತಗಳು ಚಲಾವಣೆಯಾಗಿವೆ.
ಸೋಮವಾರ ವಿಧಾನಸಭೆಯಲ್ಲಿ ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯ ಕಾನೂನು(ತಿದ್ದುಪಡಿ) ಮಸೂದೆ, 2022 ಅನ್ನು ಮಂಡಿಸಿ ಮಾತನಾಡಿದ ರಾಜ್ಯ ಶಿಕ್ಷಣ ಸಚಿವ ಬ್ರಾತ್ಯ ಬಸು ಅವರು, ಮುಖ್ಯಮಂತ್ರಿಯವರು ಕುಲಪತಿಯಾಗಿ ಅಧಿಕಾರ ವಹಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು.
ಪ್ರಧಾನಮಂತ್ರಿಗಳು ಕೇಂದ್ರೀಯ ವಿಶ್ವವಿದ್ಯಾನಿಲಯ ವಿಶ್ವಭಾರತಿಯ ಕುಲಪತಿಯಾಗಲು ಸಾಧ್ಯವಿದ್ದರೆ , ರಾಜ್ಯದ ವಿಶ್ವವಿದ್ಯಾನಿಲಯಗಳ ಕುಲಪತಿಯಾಗಲು ಮುಖ್ಯಮಂತ್ರಿಗೆ ಏಕೆ ಸಾಧ್ಯವಿಲ್ಲ? ಎಂದು ಶಿಕ್ಷಣ ಸಚಿವರು ಪ್ರಶ್ನಿಸಿದರು.
ಪ್ರಸ್ತುತ ವಿವಿಗಳ ಕುಲಪತಿಯಾಗಿರುವ ರಾಜ್ಯಪಾಲ ಜಗದೀಪ್ ಧನಕರ್ ಅವರು ವಿವಿಧ ಸಂದರ್ಭಗಳಲ್ಲಿ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಚಿವ ಬ್ರಾತ್ಯ ಬಸು ಆರೋಪಿಸಿದರು.