ನವದೆಹಲಿ: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಸ್ತೂರಿರಂಗನ್ ಸಮಿತಿ ನೀಡಿದ ವರದಿಗೆ ವಿರೋಧ ಸೂಚಿಸಿದ ರಾಜ್ಯಗಳ ಅಹವಾಲುಗಳನ್ನು ಪರಿಶೀಲಿಸುವ ಸಲುವಾಗಿ ಕೇಂದ್ರ ಪರಿಸರ ಸಚಿವಾಲಯವು ಹೊಸ ಸಮಿತಿಯನ್ನು ರಚಿಸಿದೆ.
ಕಸ್ತೂರಿರಂಗನ್ ಸಮಿತಿಯು ಪಶ್ಚಿಮ ಘಟ್ಟ ಪ್ರದೇಶದ ಮೂರನೇ ಒಂದಕ್ಕಿಂತಲೂ ಅಧಿಕ ಭಾಗವನ್ನು 'ಪರಿಸರ ಸೂಕ್ಷ್ಮ ಪ್ರದೇಶ' ಎಂದು ಗುರುತಿಸಲು ಸಲಹೆ ನೀಡಿತ್ತು. ಕರ್ನಾಟಕ ಸಹಿತ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಗೆ ಬರುವ ಆರು ರಾಜ್ಯಗಳಿಂದ ಇದಕ್ಕೆ ತೀವ್ರ ವಿರೋಧ
ವ್ಯಕ್ತವಾಗಿರುವ ಕಾರಣ ಹಿರಿಯ ಅರಣ್ಯ ಅಧಿಕಾರ ಸಂಜಯ್ ಕುಮಾರ್ ನೇತೃತ್ವದ ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಈಗಾಗಲೇ ರಚನೆಯಾಗಿರುವ ಈ ಸಮಿತಿ ಮೇ 30ರೊಳಗೆ ತನ್ನ ವರದಿ ಸಲ್ಲಿಸಬೇಕಿತ್ತು. ಆದರೆ ಆ ಗಡುವು ಮೀರಿರುವ ಕಾರಣ ವರದಿ ಸಲ್ಲಿಕೆಗೆ ಇನ್ನಷ್ಟು ಸಮಯ ನೀಡುವ ಸಾಧ್ಯತೆ ಇದೆ ಎಂದು ಮೂಲಗಳ 'ಪ್ರಜಾವಾಣಿ'ಗೆ ತಿಳಿಸಿವೆ.
ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ಮಾಧವ ಗಾಡ್ಗೀಳ್ ಸಮಿತಿ ವರದಿ ಸಲ್ಲಿಸಿ 12 ವರ್ಷ ಕಳೆದಿದ್ದು, ಕಸ್ತೂರಿರಂಗನ್ ಸಮಿತಿ ವರದಿ ನೀಡಿ ದಶಕವೇ ಕಳೆದಿದೆ. ಕಸ್ತೂರಿರಂಗನ್ ವರದಿ ಆಧರಿಸಿ ಪರಿಸರ ಸಚಿವಾಲಯವು 2014ರಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸುವ ನಿಟ್ಟನಲ್ಲಿ ಕರಡು ಅಧಿಸೂಚನೆ ಹೊರಡಿಸಿತ್ತು. ವಿವಿಧ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಕರಡು ವರದಿಯನ್ನು ದೃಢೀಕರಿಸುವ ಅವಕಾಶ ತಪ್ಪಿಹೋಗಿದೆ. ಸದ್ಯದ ಅಧಿಸೂಚನೆಗೆ ಇದೇ 30ರವರೆಗೆ ಅವಧಿ ಇದೆ.
'ಕೇರಳದ ಬಿಷಪ್‌ಗಳು ಸಹಿತ ಹಲವರಿಂದ ನಾವು ಸಲಹೆಗಳನ್ನು ಸ್ವೀಕರಿಸಿದ್ದೇವೆ. ಹೊಸ ಸಮಿತಿ ಇವುಗಳನ್ನೆಲ್ಲ ಪರಿಶೀಲಿಸಲಿದೆ' ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳ ಪ್ರತಿನಿಧಿಗಳೊಂದಿಗೆ ಆಕ್ಷೇಪಗಳ ಕುರಿತು ಸಮಗ್ರ ಚರ್ಚೆ ನಡೆಸುವುದು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಈಚೆಗೆ ಸಂಭವಿಸಿದ ನೈಸರ್ಗಿಕ ವಿಕೋಪಗಳನ್ನು ಗಮನದಲ್ಲಿ ಇಟ್ಟುಕೊಂಡು ಬಂದಿರುವ ಸಲಹೆಗಳನ್ನು ಪರಶೀಲಿಸುವ ಹೊಣೆಗಾರಿಕೆಯನ್ನು ಈ ಸಮಿತಿಗೆ ನೀಡಲಾಗಿದೆ.
ಜನರ ಧ್ವನಿ ಆಲಿಸುವ ಆಶಯ
ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸುವಾಗ ಗ್ರಾಮವೊಂದನ್ನು ಒಂದು ಘಟಕವೆಂದ ಪರಿಗಣಿಸಬೇಕೇ? ಅರಣ್ಯ, ಅರಣ್ಯೇತರ ಪ್ರದೇಶಗಳನ್ನು ಗುರುತಿಸುವುದು, ಅಧಿಸೂಚಿತ ಪ್ರದೇಶಗಳಿಂದ ಕಂದಾಯ ಪ್ರದೇಶಗಳನ್ನು ಹೊರಗಿಡುವುದರ ಬಗ್ಗೆ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಜತೆಗೆ ಸ್ಥಳೀಯ ಜನರ ಅಗತ್ಯಗಳ ಬಗ್ಗೆಯೂ ಪರಿಶೀಲನೆ ನಡೆಸಲಿದೆ.