ಕಾಸರಗೋಡು: ಬಹುತೇಕ ರೈತರು ಬೇಸಾಯ ಕೈಬಿಡುತ್ತಿರುವ ಮಧ್ಯೆ, ಜನರನ್ನು ಭತ್ತದ ಕೃಷಿಯತ್ತ ಆಕರ್ಷಿಸಲು ಬೇಡಡ್ಕ ಗ್ರಾಮಪಂಚಾಯತಿಯಲ್ಲಿ ರೈತ ಕ್ರಿಯಾಸೇನೆ ಸಕ್ರಿಯವಾಗತೊಡಗಿದೆ. ಕೃಷಿಯಲ್ಲಿ ಕಂಡುಬರುವ ನಷ್ಟ,ಅಧಿಕ ಉತ್ಪಾದನಾ ವೆಚ್ಚ ಭತ್ತದ ಕೃಷಿಯಿಂದ ರೈತರನ್ನು ವಿಮುಖರನ್ನಾಗಿಸುತ್ತಿಒರುವ ಮಧ್ಯೆ ಕ್ರಿಯಾಸೇನೆಯ ಚಟುವಟಿಕೆ ಸಮಾಜಕ್ಕೆ ಆದರ್ಶವಾಗುತ್ತಿದೆ. ಭತ್ತದ ಕೃಷಿ ನಡೆಸುವವರಿಗೆ ಸಹಾಯವಾಗುವ ರೀತಿಯಲ್ಲಿ ನಾಟಿ ಪದ್ಧತಿಯ ಭತ್ತದ ಕೃಷಿಯನ್ನು ಅಭಿವೃದ್ಧಿಪಡಿಸಲಾಗಿದೆ.
18 ರಿಂದ 55 ವರ್ಷ ವಯಸ್ಸಿನ 12 ಸದಸ್ಯರು ಈ ಕ್ರಿಯಾಸೇನೆಯಲ್ಲಿದ್ದಾರೆ. ಪ್ರತ್ಯೇಕ ಅನುಪಾತದಲ್ಲಿ ಸಣಪೂರ್ಣ ಸಾವಯವ ರೀತಿಯಲ್ಲಿ ಗೊಬ್ಬರ ತಯಾರಿಸಿ( ಮಣ್ಣು, ಸೆಗಣಿ, ತರಗೆಲೆ ಇತ್ಯಾದಿ) ಇದನ್ನು ಹದಬರಿಸಿ ಕೆಸರಿನ ರೂಪದಲ್ಲಿ ಒರಿಂಚು ಅಗಲ ಮತ್ತು ಹತ್ತು ಮೀಟರ್ ಉದ್ದವಿರುವ ಪ್ಲಾಸ್ಟಿಕ್ ಹಾಳೆಯಲ್ಲಿ ಹರಡಬೇಕು. ತೇವಾಂಶ ಕಡಿಮೆಯಾಗದಂತೆ ಇದಕ್ಕೆ ನೀರು ಸಿಂಪಡಿಸುತ್ತಿರಬೇಕು. ಹಳೇ ಹಾಗೂ ಹೊಸ ಭತ್ತವನ್ನು ಬಿತ್ತಲು ಬಳಸಲಾಗುತ್ತಿದೆ. ಸಾಮಾನ್ಯವಾಗಿ ಎರಡು ವಾರದಲ್ಲಿ ನೇಜಿ ಬೆಳೆಯುತ್ತದೆ. ಯಂತ್ರಗಳ ಸಹಾಯದಿಂದ ಈ ನೇಜಿ ನಾಟಿಮಾಡಲು ಸುಲಭವಾಗುತ್ತದೆ. ಈ ನೇಜಿಯನ್ನು ಗದ್ದೆಗಳಲ್ಲಿ ನಾಟಿಮಾಡಿದಲ್ಲಿ ನಂತರ ಹೆಚ್ಚಿನ ಪ್ರಮಾಣದ ಗೊಬ್ಬರ ಬಳಕೆಯೂ ಬೇಕಾಗಿಲ್ಲ ಎಂದು ರೈತರು ತಿಳಿಸುತ್ತಾರೆ. ಮನೆಯ ಟೆರೇಸ್‍ಗಳಲ್ಲೂ ಈ ರೀತಿಯ ವಿಧಾನವನ್ನು ನಡೆಸಬಹುದಾಗಿದೆ. ಒಂದು ಎಕರೆಗೆ 6500 ರೂಪಾಯಿ ಕ್ರಿಯಾಸೇನೆ ಪ್ರತಿಫಲವಾಗಿ ಪಡೆಯುತ್ತದೆ.