ನವದೆಹಲಿ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ನಟಿ ಸಾಯಿ ಪಲ್ಲವಿ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಇತ್ತೀಚಿಗೆ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲಾದ ಹಲ್ಲೆಯನ್ನು ಹೋಲಿಸಿ ಯಾರನ್ನೂ ಧರ್ಮದ ಹೆಸರಲ್ಲಿ ಹಿಂಸಿಸಬಾರದೆಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸಾಯಿಪಲ್ಲವಿ ಅವರು 'ಆ ಸಮಯದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ತೋರಿಸಲಾಗಿದೆ. ನೀವು ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ಪರಿಗಣಿಸುತ್ತಿದ್ದರೆ, ಇತ್ತೀಚೆಗೆ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ 'ಜೈ ಶ್ರೀ ರಾಮ್' ಎಂದು ಹೇಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಹಾಗಾದರೆ ಈ ಎರಡು ಘಟನೆಗಳ ನಡುವಿನ ವ್ಯತ್ಯಾಸ ಎಲ್ಲಿದೆ' ಎಂದು ಹೇಳಿದ್ದಾರೆ.
ನಟಿ ಸಾಯಿ ಪಲ್ಲವಿಯ ಮಾತಿಗೆ ಪರ ವಿರೋಧ ವ್ಯಕ್ತವಾಗಿದೆ. ಕೆಲವು ಟ್ವಿಟರ್ ಬಳಕೆದಾರರು ಆಕೆಯ ಧೈರ್ಯವನ್ನು ಶ್ಲಾಘಿಸಿದರೆ, ಇತರರು ಅವರನ್ನು ಟ್ರೋಲ್ ಮಾಡಿದ್ದಾರೆ.
ಅವರ ರಾಜಕೀಯ ಒಲವಿನ ಬಗ್ಗೆ ಕೇಳಲಾದ ಪ್ರಶ್ನೆಗೆ, ತಾವು ತಟಸ್ಥ ಕುಟುಂಬದಲ್ಲಿ ಬೆಳೆದರು. ಮತ್ತು ನಮಗೆ ಉತ್ತಮ ಮನುಷ್ಯರಾಗಿ ಬದುಕಲು ಕಲಿಸಲಾಯಿತು. ನೋಯುತ್ತಿರುವವರನ್ನು ರಕ್ಷಿಸಬೇಕು ಎಂದು ನನಗೆ ಕಲಿಸಲಾಗಿದೆ, ದಮನಿತರನ್ನು ರಕ್ಷಿಸಬೇಕು ಎಂದು ಅವರು ಹೇಳಿದರು.
ಸಾಯಿ ಪಲ್ಲವಿ ಪ್ರಸ್ತುತ ತಮ್ಮ ಮುಂಬರುವ ತೆಲುಗು ಚಿತ್ರ 'ವಿರಾಟ ಪರ್ವಂ' ಪ್ರಚಾರದಲ್ಲಿದ್ದಾರೆ. ರಾಣಾ ದಗ್ಗುಬಾಟಿ ನಟಿಸಿರುವ ಈ ಚಲನಚಿತ್ರವು 1990ರ ದಶಕದ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಇದು ತೆಲಂಗಾಣ ಪ್ರದೇಶದಲ್ಲಿ ನಕ್ಸಲೀಯ ಚಳವಳಿಯ ಹಿನ್ನೆಲೆಯಲ್ಲಿ ಪ್ರೇಮಕಥೆಯನ್ನು ನಿರೂಪಿಸುತ್ತದೆ. ಸಾಯಿ ಪಲ್ಲವಿ ಅವರು ನಕ್ಸಲ್ ನಾಯಕ ರಾವಣ್ಣ(ರಾಣಾ ದಗ್ಗುಬಾಟಿ) ಯನ್ನು ಪ್ರೀತಿಸುವ ವೆನ್ನೆಲಾ ಪಾತ್ರದಲ್ಲಿ ನಟಿಸಿದ್ದಾರೆ.
ಸಾಯಿ ಪಲ್ಲವಿ ಅಭಿನಯದ 'ವಿರಾಟ ಪರ್ವಂ' ಜೂನ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.