ಬೆಂಗಳೂರು: ರಕ್ಷಣಾ ಪಡೆಗಳ ಹೊಸ ನೇಮಕಾತಿ ಯೋಜನೆ ಅಗ್ನಿಪಥ್ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಈ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸರ್ಕಾರದ ಕೆಲವು ಕ್ರಮಗಳು ಇಂದು ಕಹಿ ಎನಿಸಿದರೂ ನಾಳೆ ಫಲ ನೀಡಲಿವೆ ಎಂದು ಸೋಮವಾರ ಹೇಳಿದ್ದಾರೆ.
ಇಂದು ಬೆಗಳೂರಿನಲ್ಲಿ ಹಲವು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮಗಳ ನಂತರ ಕೊಮ್ಮಘಟ್ಟದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ನಮ್ಮ ಕೆಲವು ಕ್ರಮಗಳು ಪ್ರಸ್ತುತ ದಿನಗಳಲ್ಲಿ ಕಹಿಯಾಗಿ ಕಾಣಿಸಬಹುದು. ಆದರೆ, ಅವು ಮುಂದಿನ ದಿನಗಳಲ್ಲಿ ಫಲ ನೀಡುತ್ತವೆ" ಎಂದು ತಿಳಿಸಿದರು.
ಸರ್ಕಾರಿ ವಲಯದಷ್ಟೇ ಖಾಸಗಿ ಕ್ಷೇತ್ರವೂ ಮುಖ್ಯವಾಗಿದೆ ಎಂದ ಪ್ರಧಾನಿ, ಇಬ್ಬರಿಗೂ ಸಮಾನ ಅವಕಾಶಗಳಿವೆ. "ಆದರೆ, ಜನರ ಮನಸ್ಥಿತಿ ಬದಲಾಗಿಲ್ಲ, ಅವರು ಖಾಸಗಿ ಉದ್ಯಮಗಳ ಬಗ್ಗೆ ಅಷ್ಟು ಚೆನ್ನಾಗಿ ಮಾತನಾಡುವುದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು.
ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧರಾಗಿದ್ಧೇವೆ. ನಲವತ್ತು ವರ್ಷ ಚರ್ಚೆಯಲ್ಲಿದ್ದ ಸಬ್ ಅರ್ಬನ್ ರೈಲು ಯೋಜನೆ ಆರಂಭಿಸುವ ಪುಣ್ಯ ನಮಗೆ ಸಿಕ್ಕಿದೆ ಎಂದರು.
ಬೆಂಗಳೂರು ಕನಸುಗಳ ನಗರ. ಅಭಿವೃದ್ಧಿಯೇ ಬೆಂಗಳೂರು ಯುವ ಜನತೆ ಕನಸಾಗಿದೆ. ಸರ್ಕಾರದ ನೆರವು ಸಿಕ್ಕರೆ ಬೆಂಗಳೂರಿನ ಯುವಕರು ಏನನ್ನು ಬೇಕಾದರೂ ಸಾಧಿಸುತ್ತಾರೆ. ಇಲ್ಲಿ ಅಂತಹ ಉದ್ಯಮಶೀಲತೆಯ ಶಕ್ತಿ ಇದೆ. ಬೆಂಗಳೂರು ನಗರ ಆತ್ಮನಿರ್ಭರ್ ಭಾರತ್ ಶಕ್ತಿಗೆ ಪ್ರೇರಣೆ ನೀಡಿದೆ ಎಂದು ಮೋದಿ ಹೇಳಿದರು.
ಬೆಂಗಳೂರು ಲಕ್ಷಾಂತರ ಜನರಿಗೆ ಕನಸಿನ ನಗರಿ. ಬೆಂಗಳೂರಿನ ಅಭಿವೃದ್ಧಿ ಲಕ್ಷಾಂತರ ಕನಸುಗಳ ವಿಕಾಸ. ಕೇಂದ್ರದಿಂದ ಬೆಂಗಳೂರು ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ಕೊಡಲಾಗ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಇಳಿಸಲು ಹಲವು ಯೋಜನೆ ಕೊಡಲಾಗಿದೆ. ಸಂಚಾರ ದಟ್ಡಣೆಯಿಂದ ಮುಕ್ತಿ ಕೊಡಲು ರೈಲು, ರಸ್ತೆ, ಮೂಲಸೌಕರ್ಯ ಹೆಚ್ಚಿಸಿದ್ದೇವೆ. ಮೂಲಸೌಕರ್ಯ ಕೊಡುವ ಕೆಲಸವನ್ನು ನಮ್ಮ ಡಬಲ್ ಇಂಜಿನ್ ಸರ್ಕಾರ ಮಾಡಿದೆ ಎಂದು ಹೇಳಿದರು.
ರಾಜ್ಯದಲ್ಲಿ ಐದು ನ್ಯಾಷನಲ್ ಹೈವೇ ಯೋಜನೆಗಳು, ಏಳು ರೈಲು ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇವೆ. ಹಲವು ಯೋಜನೆಗಳ ಮೂಲಕ ಜನರ ಸೇವೆಗೆ ಅವಕಾಶ ಸಿಕ್ಕಿದೆ, ಸಬರ್ಬನ್ ಯೋಜನೆ ಬಗ್ಗೆ 40 ವರ್ಷದಿಂದ ಚರ್ಚೆ ಮಾತ್ರ ನಡೀತಿತ್ತು. ಹದಿನಾರು ವರ್ಷದವರೆಗೆ ಸಬರ್ಬನ್ ರೈಲು ಯೋಜನೆ ನೆನೆಗುದಿಗೆ ಬಿದ್ದಿತ್ತು. ಈ ಸುವರ್ಣ ಅವಕಾಶ ನಮಗೆ ಸಿಕ್ಕಿದೆ. ಸಬರ್ಬನ್ ರೈಲು ಯೋಜನೆ ಥರವೇ ಬೆಂಗಳೂರು ರಿಂಗ್ ರಸ್ತೆ ಅಗಲೀಕರಣ ಮಾಡಲಿದ್ದೇವೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಕರ್ನಾಟಕದಲ್ಲಿ 1200 ಕಿ.ಮೀ ಗೂ ಹೆಚ್ಚು ವಿವಿಧ ರೈಲು ಕಾಮಗಾರಿ ಮಾಡಲಾಗಿದೆ ಎಂದು ಹೇಳಿದರು.