ನವದೆಹಲಿ: ಸಶಸ್ತ್ರ ಪಡೆಗಳ ನೂತನ ನೇಮಕಾತಿ ಯೋಜನೆ 'ಅಗ್ನಿಪಥ'ದ ವಿರುದ್ಧ ದೇಶದ ಹಲವೆಡೆ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ, ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸುವಂತೆ ಸಂದೇಶ ಕಳುಹಿಸಿದೆ.

ಈ ಕುರಿತು ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ ಅರ್ಚನಾ ವರ್ಮಾ ಅವರ ಸಹಿಯುಳ್ಳ ಪತ್ರವನ್ನು ಎಲ್ಲ ರಾಜ್ಯಗಳ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ, ಡಿಜಿಪಿಗಳಿಗೆ ಹಾಗೂ ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈಯ ಪೊಲೀಸ್ ಆಯುಕ್ತರಿಗೆ ಕಳುಹಿಸಲಾಗಿದೆ.
'ಅಗ್ನಿಪಥ ಯೋಜನೆ ವಿರೋಧಿಸಿ ಜನರು ಗುಂಪು ಸೇರುವುದು, ಧರಣಿ ನಡೆಸುವುದು, ರ್‍ಯಾಲಿಗಳನ್ನು ಆಯೋಜಿಸುವುದು ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವಂಥ ಪ್ರತಿಭಟನೆಗಳು ನಡೆಯುತ್ತಿವೆ. ಜೂನ್ 20ರಂದು ಭಾರತ್ ಬಂದ್‌ಗೆ ಕರೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಹರಿಯಬಿಡಲಾಗಿದೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಬಗ್ಗೆಯೂ ಈ ಸಂದೇಶಗಳಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಕೆಲವು ಸಮಯದ ವರೆಗೆ ಪ್ರತಿಭಟನೆಗಳು ಮುಂದುವರಿಯುವ ಸಾಧ್ಯತೆ ಇದೆ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
'ಪ್ರತಿಭಟನೆಗಳ ಕಾರಣ ರೈಲ್ವೆ ನಿಲ್ದಾಣಗಳು/ ಮಾರ್ಗಗಳು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಪ್ರಮುಖ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು' ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ಪ್ರತಿಭಟನೆ ಆರಂಭಗೊಂಡ ಬಳಿಕ ಈವರೆಗೆ ರೈಲ್ವೆಗೆ ಅತಿ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ.