ಪಟ್ನಾ: ಇಲ್ಲಿನ ಜೈಪ್ರಕಾಶ್ ನಾರಾಯಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ದೆಹಲಿಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿ ಡಿಕ್ಕಿ ಹೊಡೆದು ಬೆಂಕಿ ಕಾಣಿಸಿಕೊಂಡ ಪರಿಣಾಮ ತುರ್ತು ಭೂಸ್ಪರ್ಶ ಮಾಡಿದೆ.
ಮಧ್ಯಾಹ್ನ ಸುಮಾರು 12.10ಕ್ಕೆ ಟೇಕಾಫ್ ಆದ ವಿಮಾನಕ್ಕೆ ಹಕ್ಕಿ ಡಿಕ್ಕಿಹೊಡೆದಿದ್ದು, ನಗರದ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ ಎಂದು ಸ್ಪೈಸ್ ಜೆಟ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಟೇಕ್‌ಆಫ್ ಆದ 10 ನಿಮಿಷಗಳಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅನೇಕ ಪ್ರಯಾಣಿಕರು ವಿಮಾನದೊಳಗೆ 15ರಿಂದ 20 ನಿಮಿಷಗಳು ಕಳೆದೆವು ಎಂದು ಹೇಳಿದ್ದಾರೆ.
'ವಿಮಾನದ ಎಂಜಿನ್‌ಗೆ ಹಕ್ಕಿ ಡಿಕ್ಕಿ ಹೊಡೆದಿರುವುದಾಗಿ ಕಾಕ್‌ಪಿಟ್ ಸಿಬ್ಬಂದಿ ಶಂಕಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ, ಪ್ರಮಾಣಿತ ಕಾರ್ಯವಿಧಾನದ ಪ್ರಕಾರ ವಿಮಾನದ ಪೈಲಟ್, ತೊಂದರೆ ಕಾಣಿಸಿಕೊಂಡ ಒಂದು ಎಂಜಿನ್ ಅನ್ನು ಸ್ಥಗಿತಗೊಳಿಸಿ, ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. ರನ್‌ವೇ ಬಳಿ ನಿಯೋಜಿಸಿದ್ದ ಅಗ್ನಿಶಾಮಕ ವಾಹನಗಳು ವಿಮಾನಕ್ಕೆ ಹೊತ್ತಿದ್ದ ಬೆಂಕಿ ನಂದಿಸಿದವು' ಎಂದು ಸ್ಪೈಸ್ ಜೆಟ್ ಹೇಳಿಕೆಯಲ್ಲಿ ತಿಳಿಸಿದೆ.
'ವಿಮಾನ ಪರಿಶೀಲನೆ ನಡೆಸಿದಾಗ ಹಕ್ಕಿ ಡಿಕ್ಕಿ ಹೊಡೆದಿರುವ ಪರಿಣಾಮ ವಿಮಾನದ ಎಂಜಿನ್‌ನ ಮೂರು ಬ್ಲೇಡ್‌ಗಳು ಹಾನಿಗೊಳಗಾಗಿರುವುದು ದೃಢಪಟ್ಟಿದೆ' ಎಂದು ಅದು ಹೇಳಿದೆ.
'ಟೇಕ್ ಆಫ್ ಆದ ಕೂಡಲೇ ವಿಮಾನ ನಡುಗಿತು. ಲೈಟ್‌ಗಳು ಆಫ್ ಆಗಲು ಆರಂಭಿಸಿದವು. ತಕ್ಷಣ ನಾವು ಎಚ್ಚರಿಕೆಯ ಅಲಾರಂ ಒತ್ತಿದೆವು. ವಿಮಾನದ ಸಿಬ್ಬಂದಿ ನಮಗೆ ಶಾಂತವಾಗಿರುವಂತೆ ವಿನಂತಿಸಿದರು. ವಿಮಾನವು ಬಿಹ್ತಾ ಅಥವಾ ಅರ್ರಾಹ್‌ನಲ್ಲಿರುವ ಏರ್‌ಸ್ಟ್ರಿಪ್‌ನಲ್ಲಿ ಇಳಿಯಲಿದೆ ಎನ್ನುವ ಮಾಹಿತಿ ನೀಡಿದರು. ಅದೃಷ್ಟವಶಾತ್, ಅದು ವಿಮಾನ ನಿಲ್ದಾಣದಲ್ಲಿಯೇ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿತು' ಎಂದು ಪ್ರಯಾಣಿಕರು ತಿಳಿಸಿದರು.
'ಪ್ರಯಾಣಿಕರಿಗೆ ಪರ್ಯಾಯ ವಿಮಾನದ ಮೂಲಕ ಅವರ ಗಮ್ಯಸ್ಥಾನಕ್ಕೆ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ' ಎಂದು ವಿಮಾನ ನಿಲ್ದಾಣದ ನಿರ್ದೇಶಕ ಅಂಚಲ್ ಪ್ರಕಾಶ್ ಹೇಳಿದ್ದಾರೆ.