ಕಾಸರಗೋಡು: ಜಿಲ್ಲೆಯ ಬಡ ಜನತೆಯ ಆರೋಗ್ಯ ಕೇಂದ್ರೀಕರಿಸಿ ಚೆರ್ಕಳ ಸನಿಹದ ಮಾಸ್ತಿಕುಂಡು ಎಂಬಲ್ಲಿ ಸಿ.ಎಂ ಹೀಲಿಂಗ್ ಹ್ಯಾಂಡ್ ಮಲ್ಟಿಸ್ಪೆಶ್ಯಾಲಿಟಿ ಆಸ್ಪತ್ರೆ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ತಿಗೊಳ್ಳಲಿರುವುದಾಗಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಮೊಯ್ದೀನ್ ಜಾಸಿರ್ ಆಲಿ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಆರು ಅಂತಸ್ತು ಹೊಂದಿರುವ ಕಟ್ಟಡ ತಲೆಯೆತ್ತಲಿದ್ದು, ನೂರು ಹಾಸಿಗೆಗಳೊಂದಿಗೆ ದಿನದ 24ತಾಸುಗಳ ಕಾಲ ತಜ್ಞ ವೈದ್ಯರ ಸೇವೆ ಲಭ್ಯವಾಗುವ ರೀತಿಯಲ್ಲಿ ಆಸ್ಪತ್ರೆ ಚಟುವಟಿಕೆ ನಡೆಸಲಿದೆ. ಕಾಸರಗೋಡಿನ ಜನತೆ ಚಿಕಿತ್ಸೆಗಾಗಿ ಇತರ ಜಿಲ್ಲೆ ಹಾಗೂ ರಾಜ್ಯವನ್ನು ಆಶ್ರಯಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಗರಿಷ್ಠ ಚಿಕಿತ್ಸಾ ಸೌಲಭ್ಯ ಏರ್ಪಡಿಸಲಾಗುವುದು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ದಿನಪೂರ್ತಿ ಚಟುವಟಿಕೆ ನಡೆಸುವ ರೀತಿಯಲ್ಲಿ ನ್ಯೂರಾಲಜಿಸ್ಟ್, ನೆಫ್ರಾಲಜಿಸ್ಟ್ ಸೇವೆಯೂ ಲಭ್ಯವಾಗುವ ರೀತಿಯಲ್ಲಿ ವ್ಯವಸ್ಥೆಗೊಳಿಸಿರುವುದಾಗಿ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿ.ಎಂ ಅಬ್ದುಲ್ ಖಾದರ್ ಹಾಜಿ, ಸಿ.ಶಂಸುದ್ದೀನ್, ಕೋರ್ಡಿನೇಟರ್ ಸುದಿಲ್ ಮುಂದಾನಿ ಉಪಸ್ಥಿತರಿದ್ದರು.