ರಾಯ್‌ಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸಮಿತಿ(ಸಿಪಿಸಿಸಿ) ಬುಧವಾರ ನಿರ್ಣಯ ಅಂಗೀಕರಿಸಿದೆ.
ಮಹೇಶ್ವರಿ ಭವನದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ಎರಡು ದಿನಗಳ 'ನವ ಸಂಕಲ್ಪ ಚಿಂತನ ಶಿಬಿರ'ದ ಮೊದಲ ದಿನವೇ ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಎಐಸಿಸಿ ರಾಜ್ಯ ಉಸ್ತುವಾರಿ ಪಿಎಲ್ ಪುನಿಯಾ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮೋಹನ್ ಮಾರ್ಕಮ್, ಎಐಸಿಸಿ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ಚಂದನ್ ಯಾದವ್, ರಾಜ್ಯದ ಸಚಿವರು, ಸಂಸದರು ಮತ್ತು ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
"ರಾಹುಲ್ ಗಾಂಧಿ ಅವರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ನಿರ್ಣಯವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ(ಪ್ರಭಾರ) ಅಮರ್‌ಜೀತ್ ಚಾವ್ಲಾ ಅವರು ಪ್ರಸ್ತಾಪಿಸಿದರು, ಅದನ್ನು ಅಲ್ಲಿದ್ದ ಎಲ್ಲರೂ ಬೆಂಬಲಿಸಿದರು" ಎಂದು ಪ್ರಕಟಣೆ ತಿಳಿಸಿದೆ.
ರಾಹುಲ್ ಗಾಂಧಿ ಅವರು 2017 ರಿಂದ 19ರ ವರೆಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.