ನವದೆಹಲಿ: 'ನನ್ನ ಜೀವಿತಾವಧಿಯಲ್ಲಿ ಈ ವಿವಾದವನ್ನು ಬಗೆಹರಿಸುವೆ' ಎಂಬಂಥ ವಿಧಾನ ಭಾರತ ಮತ್ತು ಚೀನಾ ನಡುವಿನ ಗಡಿ ಸಮಸ್ಯೆ ವಿಷಯದಲ್ಲಿ ನಿರೀಕ್ಷಿತ ಫಲ ನೀಡದು. ದೀರ್ಘ ಕಾಲದಿಂದ ದೇಶವನ್ನು ಬಾಧಿಸುತ್ತಿರುವ ಈ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಲಾಗದು' ಎಂದು ಆರ್‌ಎಸ್‌ಎಸ್ ಮುಖಂಡ ರಾಮ್ ಮಾಧವ ಪ್ರತಿಪಾದಿಸಿದರು.
ನಿವೃತ್ತ ಕರ್ನಲ್ ಅನಿಲ್ ಭಟ್ ಅವರ ಕೃತಿ 'ಚೀನಾ ಬ್ಲಡೀಸ್ ಬುಲೆಟ್‌ಲೆಸ್ ಬಾರ್ಡರ್ಸ್' ಬಿಡುಗಡೆ ಮಾಡಿ ಅವರು ಮಾತನಾಡಿದರು.
'ಗಡಿ ಬಿಕ್ಕಟ್ಟಿಗೆ ಯಾರು, ಯಾವಾಗ ಪರಿಹಾರ ಒದಗಿಸುವರು ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಉಭಯ ದೇಶಗಳ ನಡುವಿನ ಗಡಿ ಸಮಸ್ಯೆಯನ್ನು ಯಾರೂ 'ವಂಶಪಾರಂಪರ್ಯ ವಿಷಯ'ವನ್ನಾಗಿ ಮಾಡಬಾರದು' ಎಂದು ಅವರು ಹೇಳಿದರು.
'ನನ್ನ ಜೀವಿತಾವಧಿಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಲುವನ್ನು ಯಾರೂ ತಳೆಯಬಾರದು. ಯಾಕೆಂದರೆ, ಯಾವುದೋ ಒಂದು ದೇಶದೊಂದಿಗೆ ನೀವು ವ್ಯವಹರಿಸುತ್ತಿಲ್ಲ. ಬದಲಾಗಿ, ಒಂದು ದೊಡ್ಡ ನಾಗರಿಕತೆ ಹಾಗೂ ಸಾಂಸ್ಕೃತಿಕವಾಗಿ ವಿಶಿಷ್ಟವಾಗಿರುವ ದೇಶವಾಗಿರುವ ಚೀನಾದೊಂದಿಗೆ ವ್ಯವಹರಿಸುತ್ತಿದ್ದೀರಿ' ಎಂದರು.
ಈ ವರೆಗೆ ಚೀನಾ ಅನುಸರಿಸಿಕೊಂಡು ಬಂದಿರುವ ಯುದ್ಧ ತಂತ್ರಗಳನ್ನು ವಿವರಿಸಿದ ಅವರು, 'ಚೀನಾವನ್ನು ಅದು ಕೈಗೊಂಡ ಕ್ರಮಗಳಿಂದಲ್ಲ, ಆ ಕ್ರಮಗಳ ಹಿಂದಿರುವ ಅದರ ಆಲೋಚನೆಗಳ ಮೂಲಕ ಅರ್ಥ ಮಾಡಿಕೊಳ್ಳಬೇಕು' ಎಂದೂ ರಾಮ್ ಮಾಧವ ಹೇಳಿದರು.