ಶ್ರೀನಗರ: 'ಭಾರತದ ಸಾರ್ವಭೌಮತೆ ಮತ್ತು ಏಕತೆಗೆ ಭಂಗ ತರುವ ಯತ್ನಗಳು ನಡೆದಲ್ಲಿ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ.
ಶ್ರೀನಗರ: 'ಭಾರತದ ಸಾರ್ವಭೌಮತೆ ಮತ್ತು ಏಕತೆಗೆ ಭಂಗ ತರುವ ಯತ್ನಗಳು ನಡೆದಲ್ಲಿ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ.
ಗಡಿಯಲ್ಲಿ ಒಳನುಸುಳುವಿಕೆ ಮತ್ತು ಭಯೋತ್ಪಾದಕ ಕೃತ್ಯಗಳ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಪರಿಸ್ಥಿತಿಯನ್ನು ಕದಡಲು ಪಾಕಿಸ್ತಾನವು ನಿರಂತರವಾಗಿ ಯತ್ನಿಸುತ್ತಿದೆ ಎಂದೂ ಇದೇ ಸಂದರ್ಭದಲ್ಲಿ ಅವರು ಆರೋಪಿಸಿದರು.
ಬಾರಾಮುಲ್ಲಾ ಜಿಲ್ಲೆಯಲ್ಲಿ ಸೇನಾ ಪಡೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ನೆರೆರಾಷ್ಟ್ರವು ನಿರಂತರವಾಗಿ ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿದೆ. ಆದರೆ, ಶಾಂತಿ ಕದಡುವ ಇಂಥ ಕೃತ್ಯಗಳಿಗೆ ಪ್ರತ್ಯುತ್ತರ ನೀಡಲು ಸೇನೆ ಸನ್ನದ್ಧವಾಗಿದೆ' ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನಾ ಕೃತ್ಯಗಳು ತಗ್ಗಿವೆ. ಇದಕ್ಕೆ ಸೇನಾ ಪಡೆಗಳು, ಬಿಎಸ್‌ಎಫ್, ಸಿಆರ್‌ಪಿಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅವಿರತ ಶ್ರಮವು ಕಾರಣವಾಗಿದೆ ಎಂದು ಸಚಿವರು ಶ್ಲಾಘಿಸಿದರು.
ಭೂಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಸೇನಾ ಪ್ರಮುಖರಾದ ಲೆಫ್ಟಿನಂಟ್ ಜನರಲ್ ಉಪೇಂದ್ರ ದ್ವಿವೇದಿ, ಲೆಫ್ಟಿನಂಟ್ ಜನರಲ್ ಅಹುಜಾ, ಮೇಜರ್ ಜನರಲ್ ಅಜಯ್ ಚಾಂದ್‌ಪುರಿಯಾ ಅವರೂ ಸಚಿವರ ಜೊತೆಗಿದ್ದರು.
ವಿಶ್ವಕ್ಕೆ 'ವಸುದೈವ ಕುಟುಂಬಕಂ' ಭಾರತ ಎಂದಿಗೂ ಶಾಂತಿಪ್ರಿಯ ರಾಷ್ಟ್ರ. ಯಾವುದೇ ರಾಷ್ಟ್ರಕ್ಕೆ ಯಾವುದೇ ರೀತಿ ನೋವುಂಟು ಮಾಡಲು ಭಾರತ ಯತ್ನಿಸಿಲ್ಲ ಅಥವಾ ಯಾವುದೇ ದೇಶದ ಒಂದಿಂಚೂ ಭೂಮಿಯನ್ನು ಕಬಳಿಸಿಲ್ಲ ಎಂದು ಹೇಳಿದರು.
ಭವಿಷ್ಯದ ಸವಾಲುಗಳನ್ನು ಸೇನಾಪಡೆಗಳು ತನ್ನ ಪೂರ್ಣ ಸಾಮರ್ಥ್ಯದೊಂದಿಗೆ ಎದುರಿಸುವ ವಿಶ್ವಾಸವಿದೆ ಎಂದು ಆಶಿಸಿದರು.