ಕಾಸರಗೋಡು: ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಔಷಧೀಯ ಸಸ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಉಳಿಸಿ ಬೆಳೆಸುವ ಕಾರ್ಯವನ್ನು ಮೇಲ್ಪರಂಬ ನಿವಾಸಿ ಆಶ್ವಾಸ ವೈದ್ಯರ್ ನಡೆಸಿಕೊಂಡು ಬರುತ್ತಿದ್ದಾರೆ.
ಔಷಧೀಯ ಗುಣವುಳ್ಳ ಸಸ್ಯಗಳ ಬಗ್ಗೆ ಮಹಿತಿ, ಅವುಗಳ ಪ್ರಯೋಜನ, ಇವುಗಳನ್ನು ನೆಟ್ಟು ಬೆಳೆಸುವುದರಿಂದ ಪರಿಸರಕ್ಕೆ ಉಂಟಾಗುವ ಲಾಭದ ಬಗ್ಗೆ ಜನತೆಗೆ ಮಾಹಿತಿ ನೀಡುತ್ತಾ ಬರುತ್ತಿರುವ ಆಶ್ವಾಸ ವೈದ್ಯರ್ ಅವರು ಗಿಡಮೂಲಿಕೆಗಳ ಉದ್ಯಾನವನ್ನೂ ನಿರ್ಮಿಸಿಕೊಡುತ್ತಿದ್ದಾರೆ. ಶಾಲಾ, ಕಾಲೇಜು, ವಿವಿಧ ಸಂಘಟನೆಗಳ ಮೂಲಕ ಆಶ್ವಾಸ ವೈದ್ಯರ್ ಅವರು ಹಲವಾರು ಔಷಧೀಯ ಸಸ್ಯಗಳನ್ನೊಳಗೊಂಡ ತೋಟವನ್ನು ಈಗಾಗಲೇ ನಿರ್ಮಿಸಿಕೊಟ್ಟಿದ್ದಾರೆ. ಮಧೂರು ಪಂಚಾಯಿತಿಯ ಪಟ್ಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಶ್ವಾಸ ವೈದ್ಯರ ನೇತೃತ್ವದಲ್ಲಿ ಶುಕ್ರವಾರ ಔಷಧೀಯ ಸಸ್ಯತೋಟ ನಿರ್ಮಾಣಕಾರ್ಯ ನಡೆಯಿತು. ನಾರ್ಕೋಟಿಕ್ ಸೆಲ್ ಡಿವೈಎಸ್‍ಪಿ ಎಂ. ಮ್ಯಾಥ್ಯೂ ಅವರು ತೋಟನಿರ್ಮಾಣಕ್ಕೆ ಚಾಲನೆ ನೀಡಿದರು. ಈಗಾಗಲೇ ಪಟ್ಲ, ಕುನಿಯ, ಕೋಳಿಯಡ್ಕ, ಪರವನಡ್ಕ, ಚೆಮ್ನಾಡ್ ಶಾಲೆಗಳಲ್ಲಿ ಔಷಧೀಯ ಸಸ್ಯ ತೋಟ ನಿರ್ಮಿಸಿಕೊಟ್ಟಿದ್ದಾರೆ.
ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಉಚಿತವಾಗಿ ಸಸ್ಯ ತೋಟವನ್ನು ಆಶ್ವಾಸ ವೈದ್ಯರ್ ನಿರ್ಮಿಸಿಕೊಡುತ್ತಿದ್ದಾರೆ. ಸುಗಂಧದ್ರವ್ಯ ವ್ಯಾಪಾರಿಯಾಗಿರುವ ಆಶ್ವಾಸ ವೈದ್ಯರ್ ಅವರು 'ಅತ್ತರ್‍ವಾಲಾ' ಎಂದೇ ನಾಡಿನಲ್ಲಿ ಪ್ರಸಿದ್ಧರು. ಗಿಡಮೂಲಿಕೆಗಳ ಸಮಗ್ರ ಮಾಹಿತಿ ಇವರಲ್ಲಿದೆ. ಔಷಧೀಯ ಗುಣವುಳ್ಳ ಸಸ್ಯಗಳನ್ನು ನೆಟ್ಟು ಬೆಳೆಸುವವರಿಗೆ ಎಲ್ಲ ರೀತಿಯ ಮಾಹಿತಿ, ಸಹಕಾರವನ್ನು ನೀಡುತ್ತಿರುವ ಇವರು, ಉಚಿತವಾಗಿಯೇ ಸಸಿಗಳನ್ನೂ ವಿತರಿಸುತ್ತಿದ್ದಾರೆ. ಆಶ್ವಾಸ ವೈದ್ಯರ್ ಅವರ ಸಂಪರ್ಕ ಸಂಖ್ಯೆ(9895027849)