ಕುಂಬಳೆ : ಇತಿಹಾಸ ಪ್ರಸಿದ್ಧ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಹಿಂಬದಿಯ ಹೊರ ಆವರಣದ ಕೆಲವೇ ಮೀಟರ್ ಮಾತ್ರ ದೂರದಲ್ಲಿ ಅನ್ಯ ಧರ್ಮಿಯವರ ಮಾಲಕತ್ವದಲ್ಲಿ ಎಂಬ ಸಂಶಯಿಸಲ್ಪಡುವ ಮೂರು ಕೋಳಿ ಮತ್ತು ಇತರ ಪ್ರಾಣಿಗಳ ತ್ಯಾಜ್ಯ ಸಂಸ್ಕರಣಾ ಘಟಕಗಳು ಯಾವದೇ ನಾಮ ಫಲಕಗಳಿಲ್ಲದೆ ತುಂಡು ರಾಜಕೀಯ ಮುಖಂಡರ ಸಹಭಾಗಿತ್ವದೊಂದಿಗೆ ಅನಧಿಕೃತವಾಗಿ ಕಾರ್ಯಾಚರಿಸಲ್ಪಡುತ್ತಿದ್ದು ಕ್ಷೇತ್ರದ ಪಾವಿತ್ರ್ಯತೆ ಮತ್ತು ಪರಿಸರ ನೈರ್ಮಲ್ಯಕ್ಕೆ ಧಕ್ಕೆಯಾಗುತ್ತಿರುವುದಾಗಿ ದೂರಲಾಗಿದೆ.
ಶ್ರೀ ಕ್ಷೇತ್ರಕ್ಕೆ ಭಾರತದ ವಿವಿಧ ರಾಜ್ಯಗಳ ಮೂಲೆ ಮೂಲೆಗಳಿಂದ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಪೃಕೃತಿ ಮಾತೆಯ ಸೊಬಗಿನ ನಿತ್ಯ ಶಾಂತಮಯವಾದ ಅನಂತಪದ್ಮನಾಭಸ್ವಾಮಿಯ ದೇಗುಲದ ಸುತ್ತಲೂ ಬೀಸುವ ತಂಗಾಳಿಯಲ್ಲಿ ಕೋಳಿ ಮತ್ತು ಪ್ರಾಣಿ ಮಾಂಸದ ದುರ್ವಾಸನೆ ಕಳೆದ ಕೆಲವು ತಿಂಗಳಿನಿಂದ ಬೀರುತ್ತಿದ್ದು ಕ್ಷೇತ್ರ ಪರಿಸರ ಸಂಪೂರ್ಣ ದುಗರ್ಂಧಮಯವಾಗಿದೆ. ಈ ದುರ್ವಾಸನೆಯಿಂದಾಗಿ ಶ್ರೀ ಕ್ಷೇತ್ರದ ಅರ್ಚಕ ವರ್ಗದವರು ಮತ್ತು ಸಿಬ್ಬಂದಿಗಳು ಆತಂಕಕ್ಕೀಡಾಗಿದ್ದು, ಇಂತಹ ವಿಷಯದ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಿದ್ದರಾದರು ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿರುವುವುದು ದುರದೃಷ್ಟಕರ.
ಇದರ ಬೆನ್ನಲ್ಲೇ ಜೂ. 5. ರಂದು ಮಧ್ಯರಾತ್ರಿ ಈ ಕೇಂದ್ರಕ್ಕೆ ಆಗಮಿಸಿದ ಕೋಳಿ ಮಾಂಸ ತ್ಯಾಜ್ಯಗಳನೊಳಗೊಂಡ ಬೃಹತ್ ಟ್ಯಾಂಕರೊಂದನ್ನು ನಾಗರಿಕರ ಕಾರ್ಯಾಚರಣೆಯಿಂದ ವಶಪಡಿಸಿ ಇದರಲ್ಲಿ ಭಾಗಿಗಳಾದ ಮಂಜೇಶ್ವರ ಕಡಂಬಾರು ಮೂಲದ ಮೂವರನ್ನು ಪೋಲೀಸರಿಗೊಪ್ಪಿಸಿದ್ದಾರೆ.
ಕ್ಷೇತ್ರ ಪರಿಸದಲ್ಲಿ ಅನಧಿಕೃತವಾಗಿ ಕಾರ್ಯಾಚರಿಸಲ್ಪಡುವ ತ್ಯಾಜ್ಯ ಸಂಸ್ಕರಣಾ ಘಟಕದ ವಿರುದ್ಧವಾಗಿ ಊರ ನಾಗರಿಕರು ಮತ್ತು ಭಕ್ತ ಜನರ ಸಭೆಯನ್ನು ಇದೆ ಬರುವ ಜೂ..9 ರಂದು ಗುರುವಾರ ಸಂಜೆ 07.30 ಕ್ಕೆ ನಡೆಸಲು ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ವತಿಯಿಂದ ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತದಿಗಳು ಆಗಮಿಸಿ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಹೋರಾಟದ ಬಗ್ಗೆ ಸೂಕ್ತ ಸಲಹೆ ಸಹಕಾರವನ್ನು ನೀಡಬೇಕಾಗಿದೆಯೆಂದು ಆಡಳಿತ ಸಮಿತಿ ವಿನಂತಿಸಿದೆ.