ಪತ್ತನಂತಿಟ್ಟ: ಅಗ್ನಿಪಥ ಯೋಜನೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆದಿದೆ. ಕೇರಳದಲ್ಲಿ ಅಖಿಲ ಭಾರತ ಯುವ ಒಕ್ಕೂಟ (ಎಐವೈಎಫ್) ಇತ್ತೀಚಗೆ ಪ್ರತಿಭಟನೆ ನಡೆಸಿದಾಗ ಕಲ್ಲು ತೂರಾಟ ನಡೆಸಿತ್ತು. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರಿಗೆ ಕಲ್ಲೇಟು ಬಿದ್ದು ಬಾಯಿಂದ ರಕ್ತ ಸೋರುತ್ತಿದ್ದರೂ ಆ ಬಗ್ಗೆ ಯೋಚಿಸದೇ ನಗುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದರ ಬೆನ್ನಲ್ಲೇ ಕಲ್ಲೇಟು ತಿಂದ ಪೊಲೀಸ್ ಅಧಿಕಾರಿ ನಗುವಿಗೆ ಕಾರಣ ಏನೆಂಬುದನ್ನು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಹೆಸರು ಅಜಿತ್. ಇವರು ಪತ್ತನಂತಿಟ್ಟ ಡಿವೈಎಸ್ಪಿ ಕಚೇರಿಯ ಸಿವಿಲ್ ಪೊಲೀಸ್ ಅಧಿಕಾರಿ. ಇವರು ತಿರುವನಂತಪುರದ ಪಲೋಡ್ ಮೂಲದವರು. ಬಾಯಿಂದ ರಕ್ತ ಸೋರುತ್ತಿದ್ದರು ಅವರು ನಗುತ್ತಿರುವ ಫೋಟೋವನ್ನು ಮಾತೃಭೂಮಿ ಮಾಧ್ಯಮದಲ್ಲಿ ಪ್ರಕಟಿಸಿತ್ತು. ಕೇರಳ ಪೊಲೀಸ್ ಇಲಾಖೆಯು ಕೂಡ ಅದೇ ಫೋಟೋವನ್ನು ಫೇಸ್ಬುಕ್ ಪೇಜ್ನಲ್ಲಿ ಪೊಸ್ಟ್ ಮಾಡಿತ್ತು.
ಈ ಬಗ್ಗೆ ಮಾತನಾಡಿರುವ ಅಜಿತ್, ಎಐವೈಎಫ್ ನಡೆಸುತ್ತಿದ್ದ ಪ್ರತಿಭಟನಾ ಸಮಯದಲ್ಲಿ ನಮ್ಮ ಪೊಲೀಸ್ ತಂಡವು ಯಾವುದೇ ಹಿಂಸೆಯನ್ನು ನಿರೀಕ್ಷೆ ಮಾಡಿರಲಿಲ್ಲ. ನಾವು ಯಾವುದೇ ಪ್ರಚೋದನಾಕಾರಿ ಕ್ರಮಗಳನ್ನು ಸಹ ತೆಗೆದುಕೊಂಡಿರಲಿಲ್ಲ. ಆದರೆ, ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ಕೆಡವಲು ಯತ್ನಿಸಿದಾಗ ಒಂದು ಕಲ್ಲು ನನ್ನ ಕಡೆಗೆ ಹಾರಿ ಬಂದು ಮುಖಕ್ಕೆ ಬಡಿಯಿತು ಎಂದಿದ್ದಾರೆ.
ಕಲ್ಲಿನಿಂದ ಹೊಡೆತ ತಿಂದ ನಂತರವೂ ಅಜಿತ್ ಅದನ್ನು ಮುಚ್ಚಿಡಲು ಪ್ರಯತ್ನಿಸಿದರು. ಆದಾಗ್ಯೂ ಅವರ ಬಾಯಿಂದ ರಕ್ತ ಸೋರಿಕೆಯಾಗಲು ಆರಂಭವಾಯಿತು. ಮುಖದಲ್ಲೂ ಕೂಡ ರಕ್ತ ಬರುತ್ತಿತ್ತು. ಅದನ್ನು ನೋಡಿ ಪ್ರತಿಭಟನಾಕಾರರು ಕೂಡ ಶಾಕ್ ಆದರು. ಇದಾದ ಬಳಿಕ ಬಹಳ ಸಹಾನುಭೂತಿ ಭಾವದಿಂದ ನೋಡುತ್ತಿದ್ದರು. ಇಡೀ ಸನ್ನಿವೇಶದಿಂದ ಎಐವೈಎಫ್ ಕಾರ್ಯಕರ್ತರು ಕೂಡ ಗೊಂದಲಕ್ಕೊಳಗಾದರು. ಇದನ್ನು ನೋಡಿ ನನಗೆ ನಗು ತಡೆಯಲು ಆಗಲಿಲ್ಲ. ಅದಕ್ಕೆ ನಕ್ಕು ಬಿಟ್ಟೆ ಎಂದು ಅಜಿತ್ ಹೇಳಿದ್ದಾರೆ.