ಬದಿಯಡ್ಕ: ಚಿನ್ನಕಳ್ಳಸಾಗಾಟ ವಿಚಾರದಲ್ಲಿ ಆರೋಪವನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಬೇಕು ಎಂಬ ಬೇಡಿಕೆಯೊಂದಿಗೆ ಬಿಜೆಪಿ ಬದಿಯಡ್ಕ ಮಂಡಲ ಮಹಿಳಾಮೋರ್ಛಾದ ನೇತೃತ್ವದಲ್ಲಿ ಬದಿಯಡ್ಕ ಬಸ್ಸು ನಿಲ್ದಾಣದ ಪರಿಸರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಉದ್ಘಾಟಿಸಿ ಮಾತನಾಡಿ, ಒಂದು ರಾಜ್ಯದ ಮುಖ್ಯಮಂತ್ರಿ ಇಂದು ಕಳ್ಳಸಾಗಾಟ ಆರೋಪ ಎದುರಿಸುತ್ತಿರುವುದು ಇಡೀ ರಾಜ್ಯದ ಜನತೆಗೆ ನಾಚಿಕೆಗೇಡಿನ ವಿಚಾರವಾಗಿದೆ. ಇಂತಹ ಭ್ರಷ್ಟ ಮುಖ್ಯಮಂತ್ರಿ ರಾಜ್ಯದಲ್ಲಿ ಶ್ರೀಮಂತ ವ್ಯಕ್ತಿ ಎಂಬುದು ಅವರ ಆಪ್ತರಿಂದಲೇ ಹೊರಬಂದ ವಿಚಾರವಾಗಿದೆ. ತನ್ನ ಸ್ಥಾನಕ್ಕೆ ಕೂಡಲೇ ರಾಜೀನಾಮೆಯನ್ನು ನೀಡಿ ತನಿಖೆಯನ್ನು ಎದುರಿಸಬೇಕಾಗಿ ಆಗ್ರಹಿಸಿದರು.
ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಪ್ನ ಜಿ. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯೆ ಶೈಲಜಾ ಭಟ್, ಜಿಲ್ಲಾ ಉಪಾಧ್ಯಕ್ಷೆ ಸೌಮ್ಯಾ ಮಹೇಶ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಎಂ., ಸುನಿಲ್ ಪಿ.ಆರ್. ಮೊದಲಾದವರು ಮಾತನಾಡಿದರು. ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಈಶ್ವರ ಮಾಸ್ತರ್, ಜಯಂತಿ ಕುಂಟಿಕಾನ ಮೊದಲಾದವರು ನೇತೃತ್ವ ವಹಿಸಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಯಶೋದ ಸ್ವಾಗತಿಸಿ, ಸದಸ್ಯೆ ಶುಭಲತಾ ವಂದಿಸಿದರು.