ಆಲಪ್ಪುಳ: ಪಾಪ್ಯುಲರ್ ಫ್ರಂಟ್ ರ್ಯಾಲಿ ವೇಳೆ ಕೊಲೆ ಘೋಷಣೆ ಕೂಗಿದ ಪ್ರಕರಣದಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿದೆ. ಪಾಪ್ಯುಲರ್ ಫ್ರಂಟ್ ಫೋರ್ಟ್ ಕೊಚ್ಚಿ ಘಟಕದ ಕಾರ್ಯದರ್ಶಿ ಸಿದ್ದಿಕ್ (53) ಅಲಿಯಾಸ್ ಬಾಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆಲಪ್ಪುಳ ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ವಿಶೇಷ ತನಿಖಾ ತಂಡ ಸಿದ್ದಿಕಿಯನ್ನು ಬಂಧಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕುಖ್ಯಾತ ಪಾಪ್ಯುಲರ್ ಫ್ರಂಟ್ ರ್ಯಾಲಿಯು ಮೇ 21 ರಂದು ಅಲಪ್ಪುಳದಲ್ಲಿ ನಡೆಯಿತು. ಪಾಪ್ಯುಲರ್ ಫ್ರಂಟ್ ಕಾರ್ಯಕರ್ತನ ಹೆಗಲ ಮೇಲಿದ್ದ ಬಾಲಕ ರ್ಯಾಲಿಯಲ್ಲಿ ಹತ್ಯೆಯ ಘೋಷಣೆ ಕೂಗಿದ ದೃಶ್ಯ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಯನ್ನು ತೀವ್ರವಾಗಿ ಟೀಕಿಸಿದ ನಂತರ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಮಧ್ಯಪ್ರವೇಶಿಸಿದ ಬಳಿಕ ಹೈಕೋರ್ಟ್ ಕೂಡ ಇದನ್ನು ಟೀಕಿಸಿತ್ತು. ಇದರೊಂದಿಗೆ ಆಲಪ್ಪುಳ ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ನಂತರ ಬಾಲಕನ ತಂದೆ ಮತ್ತು ಇತರರನ್ನು ಬಂಧಿಸಲಾಯಿತು.