ನವದೆಹಲಿ:ಮುಸ್ಲಿಮರ ವಿರುದ್ಧ ನಿರಂತರ ಧ್ವೇಷದ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದ ಕೇರಳದ ಮಾಜಿ ಪೊಲೀಸ್ ಮಹಾ ನಿರ್ದೇಶಕ ನಿರ್ಮಲ್ ಚಂದ್ರ ಅಸ್ತಾನ (ಐಪಿಎಸ್) ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ.
@NCAsthana ಹೆಸರಿನ ಅಧಿಕೃತ ಟ್ವಿಟರ್ ಹ್ಯಾಂಡಲ್ ಸದ್ಯ ಟ್ವಿಟರಿನಿಂದ ತೆಗೆದುಹಾಕಲಾಗಿದೆ.
ಇತ್ತೀಚೆಗೆ, ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಗಳು ಕಸ್ಟಡಿಯಲ್ಲಿದ್ದ ಗಲಭೆ ಆರೋಪಿಗಳನ್ನು ಲಾಠಿಗಳಿಂದ ಥಳಿಸುವ ವೀಡಿಯೊವನ್ನು ಹಂಚಿಕೊಂಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಇದನ್ನು "ಅತ್ಯಂತ ಸುಂದರ ದೃಶ್ಯ" ಎಂದು ಕರೆದಿದ್ದರು.
ಕೇರಳ ಕೇಡರ್‌ನ 1986-ಬ್ಯಾಚ್‌ನ ಐಪಿಎಸ್ ಅಧಿಕಾರಿ ಅಸ್ಥಾನಾ ಅವರು ವೀಡಿಯೊದಲ್ಲಿ ಪೊಲೀಸ್ ಸಿಬ್ಬಂದಿಯ ಕ್ರಮಗಳನ್ನು ಮತ್ತು ಬುಲ್ಡೋಝರ್ ಮೂಲಕ ನಡೆಸಿದ ಕೆಡಹುವಿಕೆಗಳನ್ನು ಶ್ಲಾಘಿಸಿ ಎರಡು ಡಝನ್‌ಗಿಂತಲೂ ಹೆಚ್ಚು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದರು.
ನಿವೃತ್ತ ಪೊಲೀಸ್ ಅಧಿಕಾರಿಯ ʼಇಸ್ಲಾಮೋಫೋಬಿಕ್ʼ ಟ್ವೀಟ್‌ಗಳು ಹಾಗೂ ಮುಸ್ಲಿಮ್ ಆರೋಪಿಗಳ ವಿರುದ್ಧ ಸರ್ಕಾರಗಳು ತೆಗೆದುಕೊಳ್ಳುತ್ತಿದ್ದ ಅಸಾಂವಿಧಾನಿಕ ಕ್ರಮಗಳ ಸಮರ್ಥನೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಗಳಿಗೆ ಕಾರಣವಾಗಿದ್ದವು.
ಅಲ್ಲದೆ, ಉತ್ತರ ಪ್ರದೇಶದ ಸಿಎಂ ಆದಿತ್ಯನಾಥರನ್ನು ಆಗಾಗ ಶ್ಲಾಘಿಸುತ್ತಿದ್ದ ಅಸ್ಥಾನ, ಪತ್ರಕರ್ತರನ್ನು, ʼಈಡಿಯಟ್ʼ ʼಕತ್ತೆಗಳುʼ ಎಂಬೆಲ್ಲಾ ನಿಂದನಾತ್ಮಕ ಪದ ಬಳಸಿ ನಿಂದಿಸುತ್ತಿದ್ದರು ಎಂದು theprint ವರದಿ ಮಾಡಿದೆ.
ಡಿಸೆಂಬರ್ 2019 ರಲ್ಲಿ ನಿವೃತ್ತರಾದ ಅಸ್ಥಾನಾ ಅವರು ಈ ಹಿಂದೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಗಳಲ್ಲಿ ಹಿರಿಯ ಹುದ್ದೆಗಳನ್ನು ನಿರ್ವಹಿಸಿದ್ದರು. ಕೇರಳದಲ್ಲಿ ಅವರು ವಿಜಿಲೆನ್ಸ್ ನಿರ್ದೇಶಕರಾಗಿ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವರ ಟ್ವಿಟರ್ ಬಯೋದಲ್ಲಿ, ಅವರು '76 ವೈಜ್ಞಾನಿಕ ಸಂಶೋಧನಾ ಪ್ರಬಂಧಗಳು ಮತ್ತು 49 ಪುಸ್ತಕಗಳನ್ನು' ಬರೆದಿರುವ 'ಪರಮಾಣು ಭೌತಶಾಸ್ತ್ರಜ್ಞ' ಎಂದು ವಿವರಿಸಿದ್ದಾರೆ. ಅಸ್ಥಾನಾ ಅವರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿ, ಅವರ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳನ್ನು 'ಡಫರ್ಸ್' ಎಂದು ಕರೆಯುವುದು ಸೇರಿದಂತೆ ಪೊಲೀಸ್ ಪಡೆಗಳ ಕುರಿತು ಅವರ ಕಾಮೆಂಟ್‌ಗಳು ಹೆಚ್ಚು ಟೀಕೆಗೊಳಗಾಗಿದ್ದವು.