ಜೈಪುರ: ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವ ಕೇಂದ್ರ ಸರ್ಕಾರದ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ವಿರುದ್ದ ದೇಶದಲ್ಲೇ ಮೊದಲು ಎಂಬಂತೆ ರಾಜಸ್ತಾನ ಸರ್ಕಾರ ನಿರ್ಣಯ ಅಂಗೀಕರಿಸಿದೆ.
ಹೌದು.. ಕೇಂದ್ರದ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಜಸ್ಥಾನದ ಸಚಿವ ಸಂಪುಟ ಶನಿವಾರ ನಿರ್ಣಯವನ್ನು ಅಂಗೀಕರಿಸಿದೆ. ಜೈಪುರದಲ್ಲಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ತಿಳಿದುಬಂದಿದೆ.
ಸೇನೆ, ನೌಕಾಪಡೆ ಮತ್ತು ವಾಯುಸೇನೆಯಲ್ಲಿ 17 ಮತ್ತು 21 ವರ್ಷ ವಯಸ್ಸಿನ ಯುವಕರನ್ನು ಹೆಚ್ಚಾಗಿ ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡುವ ಯೋಜನೆಯನ್ನು ಕೇಂದ್ರವು ಮಂಗಳವಾರ ಅನಾವರಣಗೊಳಿಸಿತ್ತು. ಈ ಯೋಜನೆಯನ್ನು ರಾಜಸ್ಥಾನ, ಬಿಹಾರ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಸೇನಾ ಆಕಾಂಕ್ಷಿಗಳು ವಿರೋಧಿಸುತ್ತಿದ್ದಾರೆ. ಯೋಜನೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ರಾಜಸ್ಥಾನ ಸಚಿವರು ಸಂಪುಟ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.
ಅಗ್ನಿಪಥ್ ಯೋಜನೆಯ 'ನಿಬಂಧನೆಗಳ ಬಗ್ಗೆ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದಿವೆ, ಇದು ಯುವಕರಲ್ಲಿ ಹಲವು ಅನುಮಾನಗಳನ್ನು ಸೃಷ್ಟಿಸಿದೆ. ಸೈನಿಕರು ಮತ್ತು ಅವರ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಮಿಲಿಟರಿಯಲ್ಲಿ ನಿಯಮಿತವಾಗಿ ನೇಮಕಾತಿ ನಡೆಯಬೇಕು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಕೇಂದ್ರ ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ಪರಿಚಯಿಸುವ ಮೊದಲು ಎಲ್ಲ ಪಾಲುದಾರರೊಂದಿಗೆ ಸಮಗ್ರ ಚರ್ಚೆ ನಡೆಸಬೇಕಿತ್ತು ಎಂದು ಸಂಪುಟ ಸಭೆ ಅಭಿಪ್ರಾಯಪಟ್ಟಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ಸೇರಿಸಲಾಗಿದೆ.