ತೃಕ್ಕಾಕರ: ತೃಕ್ಕಾಕರ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಪಿ.ಟಿ.ಥಾಮಸ್ ಅವರ ಪತ್ನಿ ಉಮಾ ಥಾಮಸ್ ದಾಖಲೆ ಬಹುಮತದಿಂದ ಜಯಗಳಿಸಿದ್ದಾರೆ. ಉಮಾ ಥಾಮಸ್ 25,016 ಮತಗಳ ಮುನ್ನಡೆಯೊಂದಿಗೆ ಸಮೀಪದ ಪ್ರತಿಸ್ಪರ್ಧಿ ಎಡಪಕ್ಷದ ಅಭ್ಯರ್ಥಿ ಜೋ ಜೋಸೆಫ್ ಅವರನ್ನು ಪರಾಭವಗೊಳಿಸಿದರು. ಇದು ತೃಕ್ಕಾಕರ ಕ್ಷೇತ್ರದ ಇತಿಹಾಸದಲ್ಲೇ ಅತಿ ದೊಡ್ಡ ಬಹುಮತ. ಕಳೆದ ಬಾರಿಗಿಂತ ಮತದಾನ ಪ್ರಮಾಣ ಕಡಿಮೆಯಾದರೂ ಕಾಂಗ್ರೆಸ್ ಗೆಲುವಿನ ಮೇಲೆ ಪರಿಣಾಮ ಬೀರಲಿಲ್ಲ.
12 ಸುತ್ತಿನ ಮತ ಎಣಿಕೆ ಮುಗಿದಾಗ ಯುಡಿಎಫ್ 72,770, ಎಲ್ ಡಿಎಫ್ 47,754 ಹಾಗೂ ಎನ್ ಡಿಎ 12,957 ಮತಗಳನ್ನು ಪಡೆದವು.
ತೃಕ್ಕಾಕರದಲ್ಲಿ ಎಡರಂಗದ ನಿರೀಕ್ಷೆಯಲ್ಲೂ ಜೋ ಜೋಸೆಫ್ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಉಮಾ ಥಾಮಸ್ ಮುನ್ನಡೆ ಕಾಯ್ದುಕೊಂಡರು. ತೃಕ್ಕಾಕರ ಕ್ಷೇತ್ರದಲ್ಲಿ ಉಮಾ ಥಾಮಸ್ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ಪತನದ ನಡುವೆಯೂ ಪಕ್ಷದ ಮತ್ತೊಂದು ಆಗಮನಕ್ಕೆ ಬೆಳಕಿಂಡಿಯಾಗಿ ಭರವಸೆ ಮೂಡಿಸಿದೆ.