ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚಿಗೆ ಘೋಷಣೆ ಮಾಡಿದ ಅಗ್ನಿಪಥ್ ಯೋಜನೆ ಅಡಿ ನೇಮಕಾತಿ ನಡೆಸಲು ಭಾರತೀಯ ಸೈನೆ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ಜುಲೈನಲ್ಲಿ ಆನ್‌ಲೈನ್ ನೋಂದಣಿ ಆರಂಭವಾಗಲಿದೆ.
ಹೊಸ ಮಾದರಿಯ ಸೇನಾ ನೇಮಕಾತಿಯಲ್ಲಿ ಎಲ್ಲಾ ಉದ್ಯೋಗ ಆಕಾಂಕ್ಷಿಗಳು ವೆಬ್‌ಸೈಟ್‌ನಲ್ಲಿ ಆನ್‌ಲೈನ್ ನೋಂದಣಿ ಕಡ್ಡಾಯವಾಗಿದ್ದು, ಆನ್‌ಲೈನ್ ನೋಂದಣಿ ಜುಲೈನಲ್ಲಿ ಪ್ರಾರಂಭವಾಗುತ್ತದೆ ಎಂದು ಸೇನೆ ತಿಳಿಸಿದೆ.
ಭಾರತೀಯ ಸೇನೆಯಲ್ಲಿ 'ಅಗ್ನಿವೀರರ' ಒಂದು ವಿಶಿಷ್ಟ ಶ್ರೇಣಿಯನ್ನು ರೂಪಿಸುತ್ತದೆ. ಇದು ಅಸ್ತಿತ್ವದಲ್ಲಿರುವ ಇತರೆ ಶ್ರೇಣಿಗಳಿಗಿಂತ ಭಿನ್ನವಾಗಿರುತ್ತದೆ ಎಂದು ಸೇನೆ ಹೇಳಿದೆ.
ಈ ಯೋಜನೆಯ ವಿವರವಾದ ಟಿಪ್ಪಣಿಯಲ್ಲಿ ಸೇನೆಯು, 'ಅಗ್ನಿವೀರರ' ಅಧಿಕೃತ ರಹಸ್ಯ ಕಾಯಿದೆ, 1923ರ ಅಡಿಯಲ್ಲಿ ಯಾವುದೇ ಅನಧಿಕೃತ ವ್ಯಕ್ತಿ ಅಥವಾ ಮೂಲಕ್ಕೆ ನಾಲ್ಕು ವರ್ಷಗಳ ಸೇವಾ ಅವಧಿಯಲ್ಲಿ ಗಳಿಸಿದ ವರ್ಗೀಕೃತ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ನಿರ್ಬಂಧಿಸುತ್ತದೆ ಎಂದು ಹೇಳಿದೆ.
ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ವಿರೋಧಿಸಿ ದೇಶದ ಹಲವು ಭಾಗಗಳಲ್ಲಿ ಯುವ ಜನತೆ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಸೇನಾಮುಖ್ಯಸ್ಥರು ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ನೇಮಕಾತಿ ಪ್ರಕ್ರಿಯೆಗೆ ಪ್ರಮಾಣಪತ್ರ ಕಡ್ಡಾಯ ಎಂದು ಸೇನೆ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಅವರು, 'ಕೇಂದ್ರ ಸರ್ಕಾರ ಘೋಷಿಸಿರುವ ಸೇನಾ ನೇಮಕಾತಿಗೆ ಸಂಬಂಧಿಸಿದ 'ಅಗ್ನಿಪಥ' ಯೋಜನೆಗೆ ಅರ್ಜಿ ಸಲ್ಲಿಸುವವರು ಲಿಖಿತ ರೂಪದಲ್ಲಿ ಪ್ರತಿಜ್ಞಾ ಘೋಷಣೆಯನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.