ವಡೋದರ: ಸ್ವಯಂ ವಿವಾಹದ ಕುರಿತಾಗಿ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಗುಜರಾತ್ ಮೂಲದ ಯುವತಿ ಸ್ವಯಂ ವಿವಾಹ ಪದ್ಧತಿಯಂತೆ ಗುರುವಾರ ಮದುವೆಯಾಗಿದ್ದಾರೆ. ಇದು ದೇಶದಲ್ಲೇ ಮೊದಲ ಪ್ರಯತ್ನ.
ಮುಖ್ಯವಾಗಿ ಕ್ಷಮಾ ಬಿಂದು ಅವರ ವಿವಾಹ ಜೂನ್ 11 ರಂದು ದೇವಾಲಯದಲ್ಲಿ ನಿಗದಿಯಾಗಿತ್ತು. ಆದರೆ ಇವರ ವಿವಾಹಕ್ಕೆ ಸ್ಥಳೀಯ ರಾಜಕಾರಣಿಗಳು, ಮುಖಂಡರು, ಪುರೋಹಿತರು ವಿರೋಧ ವ್ಯಕ್ತಪಡಿಸಿದ ಕಾರಣ ಈಗ ಎರಡು ದಿನ ಮೊದಲೇ ವಿವಾಹವಾಗಿದ್ದಾರೆ.
ಕ್ಷಮಾ ಬಿಂದು ಅವರು ವರನನ್ನು ವರಿಸಲು ಇಷ್ಟವಿಲ್ಲದ ಕಾರಣ, ಏಕಾಂಗಿಯಾಗಿ ಜೀವಿಸಲು ನಿರ್ಧರಿಸಿರುವ ಕಾರಣ ಸ್ವಯಂ ವಿವಾಹದ ನಿರ್ಧಾರ ತೆಗೆದುಕೊಂಡಿದ್ದರು. ಇವರ ಈ ನಿರ್ಧಾರವು ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ತೀವ್ರ ವಿರೋಧ ವ್ಯಕ್ತವಾಗಿತ್ತು.
ಇವರ ವಿವಾಹ ಜೀವನಕ್ಕೆ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ನನಗೆ ಸಂದೇಶ ಕಳುಹಿಸಿದ ಮತ್ತು ನನ್ನನ್ನು ಅಭಿನಂದಿಸಿದ ಮತ್ತು ನನ್ನ ನಂಬಿಕೆ ಪರ ಹೋರಾಡುವ ಶಕ್ತಿಯನ್ನು ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಕ್ಷಮಾ ಬಿಂದು ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.
“ಸ್ವ-ವಿವಾಹವು ಸ್ವಯಂ ಬದ್ಧತೆ ಮತ್ತು ಪ್ರೀತಿಯಾಗಿದೆ. ಇದು ಸ್ವಯಂ ಸ್ವೀಕಾರ ಕ್ರಿಯೆಯೂ ಹೌದು. ಜನರು ಪ್ರೀತಿಸುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ. ಆದ್ದರಿಂದ ಈ ಮದುವೆ ಎಂದು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಕ್ಷಮಾ ವಿವರಿಸಿದ್ದಾರೆ.