ಪಾಟ್ನಾ: ಜಾತಿ ಆಧಾರಿತ ಜನಗಣತಿ ನಡೆಸಲು ಕೇಂದ್ರದ ಅಸಮರ್ಥತೆಯ ನಂತರ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಬಿಹಾರದಲ್ಲಿ ಜಾತಿ ಆಧಾರಿತ ಜನಗಣತಿ ನಡೆಸಲು ಗುರುವಾರ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಇಂದು ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಮುಖ್ಯ ಕಾರ್ಯದರ್ಶಿ ಅಮೀರ್ ಸುಭಾನಿ, ಜಾತಿ ಆಧಾರಿತ ಜನಗಣತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಇದಕ್ಕಾಗಿ ಬಜೆಟ್ ನಲ್ಲಿ 500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.
ಮುಂದಿನ ವರ್ಷ ಫೆಬ್ರುವರಿ 23ರೊಳಗೆ ಜಾತಿ ಆಧಾರಿತ ಜನಗಣತಿ ಪೂರ್ಣಗೊಳ್ಳಲಿದ್ದು, ಸಾಮಾನ್ಯ ಆಡಳಿತ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದ ಕೂಡಲೇ ಜನಗಣತಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯವಾಗಿ ಜಾತಿ ಗಣತಿ ನಡೆಸಲು ಕೇಂದ್ರವು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ "ಎಲ್ಲಾ ಜಾತಿಗಳು ಮತ್ತು ಸಮುದಾಯಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆ" ನಡೆಸಲು ತಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಬುಧವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದರು.