ಉಪ್ಪಳ: ಅರಳು ಹುರಿದಂತೆ ಶ್ರೀಮದ್ಭಗವದ್ಗೀತೆ ಕಂಠಾಪಾಠ ನುಡಿಯುವ ಬಾಯಾರಿನ 10ರ ಹರೆಯದ ಬಾಲೆ ಸಾನ್ವಿ ಭಟ್‍ಗೆ ಮೈಸೂರಿನ ಶ್ರೀ ಸಚ್ಛಿದಾನಂದ ಗಣಪತಿ ಆಶ್ರಮದ ಅವಧೂತ ದತ್ತÀಪೀಠ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಆನ್ಲೈನ್ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಬಂಗಾರದ ಪದಕ ಬಹುಮಾನದೊಂದಿಗೆ ಶ್ರೀಗಳ ಪ್ರಶಂಸೆ ದೊರಕಿದೆ. ಇತ್ತೀಚಿಗೆ ಮೈಸೂರಿನ ದತ್ತಪೀಠದ ಪ್ರಾರ್ಥನಾ ಮಂದಿರದಲ್ಲಿ ಪ್ರಶಸ್ತಿಪತ್ರ ಮತ್ತು ಚಿನ್ನದ ಪದಕವನ್ನು ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಬಾಲಕಿಗೆ ಪ್ರದಾನ ಮಾಡಿದರು.
ಬಾಯಾರು ನಿಡುವಜೆಯ ರಾಜೇಶ್ ಭಟ್ ಎನ್. ಮತ್ತು ಮುಳಿಗದ್ದೆ ಹೆದ್ದಾರಿ ಎಯುಪಿ ಶಾಲೆಯ ಅಧ್ಯಾಪಕಿ ಮಮತಾ ದಂಪತಿಯ ಪುತ್ರಿಯಾದ ಸಾನ್ವಿ ಭಟ್ ಬಾಯಾರು ಹೆದ್ದಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ. ದುಬೈ, ಅಮೇರಿಕಾ ಸಹಿತ ಅಂತರಾಷ್ಟ್ರಗಳಿಂದ ಸಾವಿರಾರು ಮಂದಿ ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ 480 ಮಂದಿ ಸ್ಪರ್ಧಾಳುಗಳು ಅಂತಿಮ ಸುತ್ತಿಗೆ ತಲುಪಿದ್ದರು. 5ರಿಂದ 80ರ ವರೆಗಿನ ವಯೋಮಾನದವರು ಪಾಲ್ಗೊಂಡಿದ್ದ ಸ್ಪರ್ಧೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು.
ಕಳೆದ 2021ರ ಫೆ. ತಿಂಗಳಲ್ಲಿ ಭಗವದ್ಗೀತಾ ಕಂಠಪಾಠ ಕಲಿಕೆ ಆರಂಭಿಸಿದ ಈಕೆಯೀಗ 700 ಶ್ಲೋಕಗಳನ್ನು ನಿರರ್ಗಳ ಮತ್ತು ಸ್ಪಷ್ಟತೆಯಿಂದ ಅಸ್ಖಲಿತವಾಗಿ ನುಡಿಯುತ್ತಾಳೆ. ಗುರುಗಳಾದ ಸತ್ಯವಾಣಿ, ರಾಜಶ್ರೀ ಅವರಿಂದ ಮಾರ್ಗದರ್ಶನ ಪಡೆಯುತ್ತಿರುವ ಈಕೆ ಮಂಜೇಶ್ವರ ನಾಟ್ಯನಿಲಯದ ಬಾಲಕೃಷ್ಣ ಮಂಜೇಶ್ವರ ಅವರಿಂದ ಭರತನಟ್ಯ ಶಿಕ್ಷಣವನ್ನೂ ಪಡೆಯುತ್ತಿದ್ದಾಳೆ. ಗಡಿನಾಡು ಕಾಸರಗೋಡಿನ ಗ್ರಾಮೀಣ ವಿದ್ಯಾರ್ಥಿನಿಯಾದ ಈಕೆಯ ಪ್ರತಿಭಾ ಸಾಧನೆಗೆ ಬಾಯಾರು ಹೆದ್ದಾರಿ ಎ.ಯು.ಪಿ ಶಾಲೆಯ ಶಿಕ್ಷಕ-ರಕ್ಷಕ ಮಂಡಳಿ ಅಭಿನಂಧಿಸಿದೆ.