ವಯನಾಡ್: ಶಾಸಕ, ಕಾಂಗ್ರೆಸ್ಸ್ ನೇತಾರ ಟಿ ಸಿದ್ದಿಕ್ ಅವರ ಗನ್ ಮ್ಯಾನ್ ನನ್ನು ಅಮಾನತು ಮಾಡಲಾಗಿದೆ. ಗನ್ ಮ್ಯಾನ್ ಕೆವಿ ಸ್ಮಿಬಿನ್ ಅವರನ್ನು ಅಮಾನತುಗೊಳಿಸಲಾಗಿದೆ. ನಿನ್ನೆ ಕಲ್ಪೆಟ್ಟದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಶಾಸಕರನ್ನು ರಕ್ಷಿಸುವ ಹೊಣೆಗಾರಿಕೆ ಅವರ ಮೇಲಿತ್ತು. ಆದರೆ ಅದನ್ನು ಕೈಬಿಟ್ಟು ಯುಡಿಎಫ್ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೋಲೀಸರ ವಿರುದ್ದವೇ ಘೋಷಣೆ ಮೊಳಗಿಸಿ ಪ್ರತಿಭಟನೆಯ ಉಸ್ತುವಾರಿಯಲ್ಲಿದ್ದ ಕಾರಣ ಕರ್ತವ್ಯ ಲೋಪದ ಹೆಸರಲ್ಲಿ ಅಮಾನತುಗೊಳಿಸಲಾಗಿದೆ. ವಿಶೇಷ ಶಾಖೆಯ ವರದಿಯ ಆಧಾರದ ಮೇಲೆ ವಯನಾಡ್ ಜಿಲ್ಲಾ ಪೋಲೀಸರು ಕ್ರಮ ಕೈಗೊಂಡಿದ್ದಾರೆ.
ರಾಹುಲ್ ಗಾಂಧಿ ಕಚೇರಿ ಮೇಲೆ ದಾಳಿ ನಡೆಸಿದ ಎಸ್‍ಎಫ್‍ಐ ಕಾರ್ಯಕರ್ತ ಕೆಆರ್ ಅವಿಶಿತ್ ಅವರನ್ನು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಆಪ್ತ ಸಿಬ್ಬಂದಿ ಪದವಿಯಿಂದ ವಜಾಗೊಳಿಸಲಾಗಿದೆ. ಇದರ ಬೆನ್ನಲ್ಲೇ ಟಿ ಸಿದ್ದಿಕ್ ಅವರ ಗನ್ ಮ್ಯಾನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಈ ಮಧ್ಯೆ, ಸಂಸದ ರಾಹುಲ್ ಗಾಂಧಿ ಅವರ ಕಚೇರಿ ಮೇಲೆ ನಡೆದ ದಾಳಿಯನ್ನು ಪ್ರತಿಭಟಿಸಿ ಕಾಂಗ್ರೆಸ್ ಸಮಾವೇಶ ನಡೆಸಿದ ಬಳಿಕ ದೇಶಾಭಿಮಾನಿ ಕಚೇರಿ ಮೇಲೆಯೂ ದಾಳಿ ನಡೆಸಲಾಗಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಎಸ್ ಒಯು ರಾಜ್ಯಾಧ್ಯಕ್ಷ ಕೆ.ಎಂ.ಅಭಿಜಿತ್, ಉಪಾಧ್ಯಕ್ಷ ಜಶೀರ್ ಪಳ್ಳಿವಾಯಲ್ ಸೇರಿದಂತೆ ಸುಮಾರು 50 ಮಂದಿ ವಿರುದ್ಧ ಕಲ್ಪೆಟ್ಟ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೇಶಾಭಿಮಾನಿ ಕಚೇರಿ ಮೇಲೆ ದಾಳಿ ನಡೆಸಿದ ನಾಯಕರ ಬಗ್ಗೆಯೂ ಕೊಡಿಯೇರಿ ಬಾಲಕೃಷ್ಣನ್ ಟೀಕಿಸಿದ್ದಾರೆ.ಹಿಂಸಾಚಾರ ಏಕೆ ನಡೆದಿದೆ ಎಂಬುದನ್ನು ಮುಖಂಡರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿರುವರು.