ನವದೆಹಲಿ: ನಕಲಿ ರಾಷ್ಟ್ರೀಯವಾದಿಗಳನ್ನು ಗುರುತಿಸುವಂತೆ ಯುವಕರನ್ನು ಒತ್ತಾಯಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಕೇಂದ್ರದ ಅಗ್ನಿಪಥ್ ಯೋಜನೆಯನ್ನು ಶಾಂತಿಯುತವಾಗಿ ಪ್ರತಿಭಟಿಸುವವರಿಗೆ ತಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದಿದ್ದಾರೆ.
ವಿವಾದಿತ ಯೋಜನೆಯನ್ನು ವಿರೋಧಿಸುತ್ತಿರುವ ಯುವಕರ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸಂಸದರು ಮತ್ತು ಮುಖಂಡರು ಪಾಲ್ಗೊಂಡು ದೆಹಲಿಯ ಜಂತರ್ ಮಂತರ್‌ನಲ್ಲಿ ಸತ್ಯಾಗ್ರಹ ನಡೆಸುತ್ತಿರುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ನಿಮಗಿಂತ ದೊಡ್ಡ ದೇಶಭಕ್ತರಿಲ್ಲ. ಕಣ್ಣು ತೆರೆದು ನೋಡಿ, ನಕಲಿ ರಾಷ್ಟ್ರವಾದಿಗಳು ಮತ್ತು ನಕಲಿ ದೇಶಭಕ್ತರನ್ನು ಗುರುತಿಸಿ ಎಂದು ಒತ್ತಾಯಿಸಿದ್ದಾರೆ. ನಿಮ್ಮ ಹೋರಾಟದಲ್ಲಿ ಇಡೀ ದೇಶ ಮತ್ತು ಕಾಂಗ್ರೆಸ್ ಇದೆ ಎಂದು ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಯುವಕರನ್ನುದ್ದೇಶಿಸಿ ಹೇಳಿದರು.
ತಮ್ಮ ಭಾಷಣದಲ್ಲಿ ಹರಿವಂಶ ರಾಯ್ ಬಚ್ಚನ್ ಅವರ ಹಿಂದಿ ಕವಿತೆ 'ಅಗ್ನಿಪಥ'ದ ಸಾಲುಗಳನ್ನು ಸಹ ಪ್ರಿಯಾಂಕಾ ಉಲ್ಲೇಖಿಸಿದರು. ಯುವಕರು ಪರಿಶ್ರಮ ಮತ್ತು ಶಾಂತಿಯುತ ಹೋರಾಟವನ್ನು ಮುಂದುವರಿಸಲು ಒತ್ತಾಯಿಸಿದರು. "ಯುವಜನತೆಯನ್ನು ನಾಶ ಮಾಡುವ ಯೋಜನೆಗೆ ಕವಿತೆಯ ಹೆಸರು ಇಡಲಾಗಿದೆ. ಈ ಯೋಜನೆಯು ಸೈನ್ಯವನ್ನು ನಾಶಪಡಿಸುತ್ತದೆ. ಇದರ ಹಿಂದೆ ಬಿಜೆಪಿ ಸರ್ಕಾರದ ಉದ್ದೇಶಗಳನ್ನು ಗುರುತಿಸಿ. ಪ್ರಜಾಪ್ರಭುತ್ವದ ಮಾರ್ಗದಲ್ಲಿ, ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆಯುವ ಮೂಲಕ ಯೋಜನೆಯನ್ನು ರದ್ದುಮಾಡುವಂತೆ ಮಾಡಿ. ದೇಶದ ಮೇಲೆ ನಿಜವಾದ ದೇಶಪ್ರೇಮ ತೋರಿಸುವ ಸರ್ಕಾರ ರಚಿಸಲಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಅಗ್ನಿಪಥ್ ಯೋಜನೆಯನ್ನು ಅನಾವರಣಗೊಳಿಸಿದ ಸರ್ಕಾರ, ಹದಿನೇಳುವರೆ ವರ್ಷದಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇರ್ಪಡೆಗೊಳಿಸಲಾಗುವುದು, ಶೇಕಡಾ 25ರಷ್ಟು ನೇಮಕಾತಿಗಳನ್ನು ನಿಯಮಿತ ಸೇವೆಗೆ ಉಳಿಸಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಹೊಸ ಯೋಜನೆಯಡಿ ನೇಮಕಗೊಳ್ಳುವ ಯುವಕರನ್ನು 'ಅಗ್ನಿವೀರ್' ಎಂದು ಕರೆಯಲಾಗುತ್ತದೆ.
ಸೇನೆ, ನೌಕಾಪಡೆ ಮತ್ತು ವಾಯುಸೇನೆಗೆ ಸೈನಿಕರನ್ನು ಸೇರ್ಪಡೆಗೊಳಿಸುವ ಹೊಸ ಮಾದರಿಯ ವಿರುದ್ಧ ದೇಶದ ಕೆಲವು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆಯುತ್ತಿದೆ.