ನವದೆಹಲಿ: 'ಅಗ್ನಿಪಥ' ಯೋಜನೆಯಡಿ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ಹೊರಬರುವ 'ಅಗ್ನಿವೀರ'ರಿಗೆ ವಾಣಿಜ್ಯ ನೌಕಾ ವಿಭಾಗದಲ್ಲಿ (ಮರ್ಚೆಂಟ್ ನೇವಿ) ಆರು ಸೇವಾ ಆಯ್ಕೆಗಳನ್ನು ನೀಡಲಾಗುವುದು ಎಂದು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ತಿಳಿಸಿದೆ.

ಈ ವಿಚಾರವಾಗಿ ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ವಿಶ್ವದಾದ್ಯಂತ 'ಮರ್ಚೆಂಟ್ ನೇವಿ'ಯಲ್ಲಿ ಉದ್ಯೋಗಕ್ಕೆ ಸೇರಲು ಅಗತ್ಯವಿರುವ ವೃತ್ತಿಪರ ತರಬೇತಿ, ಪ್ರಮಾಣಪತ್ರ ಒದಗಿಲಾಗುವುದು ಎಂದು ಉಲ್ಲೇಖಿಸಿದೆ.
ಅಗ್ನಿಪಥ ಯೋಜನೆ ವಿರುದ್ಧ ದೇಶದಾದ್ಯಂತ ಯುವಕರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಸಚಿವಾಲಯ ಈ ನಿರ್ಧಾರ ಪ್ರಕಟಿಸಿದೆ.
ನೂತನ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸರ್ಕಾರವು ಅಗ್ನಿವೀರರಿಗೆ ಹಲವು ಉದ್ಯೋಗ ಆಯ್ಕೆಗಳನ್ನು ಘೋಷಿಸುತ್ತಿದೆ.
ಅಗ್ನಿಪಥ ಯೋಜನೆಯಲ್ಲಿ ಅಗ್ನಿವೀರರಿಗೆ 2-3 ಆಯ್ಕೆಗಳಿವೆ. 4 ವರ್ಷಗಳ ಬಳಿಕ ವಾಯುಪಡೆಯ ಸೇವೆಗೆ ಮರು-ನೋಂದಣಿ ಮಾಡಿಕೊಳ್ಳಬಹುದು. ಆಗ ಅವರಿಗೆ ಪಿಂಚಣಿ ಸೌಲಭ್ಯ ದೊರೆಯಲಿದೆ. ಉನ್ನತ ಶಿಕ್ಷಣವನ್ನು ಮುಂದುವರಿಸಲು ಬಯಸಿದರೆ ಮಾಡಬಹುದು ಅಥವಾ ಸ್ವಂತವಾಗಿ ಉದ್ಯಮವನ್ನು ಸ್ಥಾಪಿಸಲು ಬಯಸಿದರೆ ಅದನ್ನು ಮಾಡಬಹುದು. ಇಲ್ಲವೆ ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ದೊರೆಯಲಿದೆ ಎಂದು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಹೇಳಿದ್ದಾರೆ. ಇದಕ್ಕೂ ಮುನ್ನ, ಅಗತ್ಯ ಅರ್ಹತಾ ಮಾನದಂಡಗಳನ್ನು ಪೂರೈಸುವ 'ಅಗ್ನಿವೀರ'ರಿಗೆ ರಕ್ಷಣಾ ಇಲಾಖೆಯಲ್ಲಿ ಶೇಕಡಾ 10ರಷ್ಟು ಉದ್ಯೋಗ ಮೀಸಲಿಡುವ ಪ್ರಸ್ತಾವವನ್ನು ಸಚಿವ ರಾಜನಾಥ ಸಿಂಗ್ ಅವರು ಅನುಮೋದಿಸಿದ್ದರು.