ಮಣ್ಣು ಉಳಿಸಿ ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹವನ್ನು ವ್ಯಕ್ತಪಡಿಸಿದ ಪ್ರಧಾನಿ, ಅಭಿಯಾನವನ್ನು 'ಮಾನವೀಯತೆಗೆ ಸಂದ ಒಂದು ದೊಡ್ಡ ಸೇವೆ' ಎಂದು ಬಣ್ಣಿಸಿದರು. ಸದ್ಗುರುವಿನ ಶ್ರಮದಾಯಕ ಮೋಟಾರ್ ಸೈಕಲ್ ಪ್ರಯಾಣವನ್ನು ಅನುಮೋದಿಸಿದ ಅವರು, ಈ ಪಯಣದಿಂದಾಗಿ ಪ್ರಪಂಚಕ್ಕೆ ಮಣ್ಣಿನ ಬಗ್ಗೆ ಒಲವು ಮೂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಇದರಿಂದ ಪ್ರಪಂಚವು, ಭಾರತದ ಮಣ್ಣಿನ ಶಕ್ತಿಯನ್ನೂ ಕಣ್ಣಾರೆ ಕಂಡಿದೆ ಎಂದರು.
ಕಾರ್ಯಕ್ರಮದ ನಂತರ ಪ್ರಧಾನ ಮಂತ್ರಿಯವರಿಗೆ ಮಣ್ಣು ಉಳಿಸಿ ನೀತಿಯ ಕೈಪಿಡಿಯನ್ನು ಸದ್ಗುರು ನೀಡಿದರು. ಕೈಪಿಡಿಯು ಸರ್ಕಾರಗಳು ತಮ್ಮ ತಮ್ಮ ದೇಶದಲ್ಲಿ ಮಣ್ಣನ್ನು ಪುನರುಜ್ಜೀವನಗೊಳಿಸಲು ಕೈಗೊಳ್ಳಬಹುದಾದಂತಹ ಪ್ರಾಯೋಗಿಕ, ವೈಜ್ಞಾನಿಕ ಪರಿಹಾರಗಳನ್ನು ನೀಡುತ್ತದೆ ಎಂದು ತಿಳಿಸಿದರು.
ಸದ್ಗುರು ಮಣ್ಣು ರಕ್ಷಿಸಿ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ನೂರು ದಿನಗಳ 30 ಸಾವಿರ ಕಿ.ಮೀ. ದೂರದ ಏಕಾಂಗಿ ಪ್ರಯಾಣ ಇಂದಿಗೆ 75ನೇ ದಿನವನ್ನು ತಲುಪಿದ್ದು, ಅವರು ಈಗಾಗಲೇ 26 ದೇಶಗಳಲ್ಲಿ ಸಂಚರಿಸಿದ ಸದ್ಯ ಭಾರತದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಅಭಿಯಾನದಲ್ಲಿ ಇಲ್ಲಿಯವರೆಗೆ 2.5 ಶತಕೋಟಿ ಜನರನ್ನು ತಲುಪಿದ್ದು, 74 ದೇಶಗಳು ತಮ್ಮ ರಾಷ್ಟ್ರಗಳ ಮಣ್ಣನ್ನು ಉಳಿಸಲು ಕಾರ್ಯನಿರ್ವಹಿಸಲು ಒಪ್ಪಿಕೊಂಡಿವೆ. ಭಾರತದ 15 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಧಾನಿಯವರಿಗೆ ಪತ್ರ ಬರೆದಿದ್ದು, ರಾಷ್ಟ್ರದ ಮಣ್ಣು ಮತ್ತು ಅವರ ಭವಿಷ್ಯವನ್ನು ಉಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಒಂದು ಪರಿಹಾರವನ್ನು ಸಾಕಾರಗೊಳಿಸಲು, ಎಲ್ಲಾ ನಾಗರಿಕರು ಸಹಕಾರ ನೀಡಬೇಕು ಮತ್ತು ಇದನ್ನು ಪರಿಹರಿಸಲು ಅಗತ್ಯವಿರುವ ದೀರ್ಘಾವಧಿಯ ಉಪಕ್ರಮಗಳಲ್ಲಿ ಸರ್ಕಾರವನ್ನು ಬೆಂಬಲಿಸಬೇಕು ಎಂದು ಸದ್ಗುರು ನೆರೆದಿದ್ದ ಸಭಿಕರನ್ನು ಆಗ್ರಹಪಡಿಸಿದರು.
ನಾವು ದೇಶದ ಆಹಾರ ಭದ್ರತೆ ಖಚಿತಪಡಿಸಿಕೊಳ್ಳಲು, ರೈತರ ಆದಾಯ ಹೆಚ್ಚಿಸಲು, ಜೀವವೈವಿಧ್ಯತೆ ಕಾಪಾಡಲು ಮತ್ತು ನಮ್ಮ ಮಣ್ಣಿನಲ್ಲಿ ಜೀವಂತಿಕೆಯನ್ನು ಮರಳಿ ತರಲು ಬಯಸಿದಲ್ಲಿ, ಮಣ್ಣನ್ನು ಉಳಿಸುವುದು ಬಹಳ ಮುಖ್ಯ ಎಂದ ಸದ್ಗುರು, ಅಗತ್ಯವಿರುವ ಸಚಿವಾಲಯಗಳೊಂದಿಗೆ ಕೆಲಸ ಮಾಡಲು 'ಕಾನ್ಶಿಯಸ್ ಪ್ಲಾನೆಟ್(ಪ್ರಜ್ಞಾವಂತ ಪ್ರಪಂಚ), ಮಣ್ಣು ಉಳಿಸಿ ಅಭಿಯಾನದ ಸಂಪೂರ್ಣ ಬೆಂಬಲವನ್ನು ನೀಡುವ ಮೂಲಕ ಈ ದಿಕ್ಕಿನಲ್ಲಿ ಕ್ರಿಯಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಪ್ರಧಾನ ಮಂತ್ರಿಯವರನ್ನು ವಿನಂತಿಸಿ ಕೊಂಡರು.
ಭಾರತದಲ್ಲಿ, ಸುಮಾರು ಶೇ.30 ಫಲವತ್ತಾದ ಮಣ್ಣು ಈಗಾಗಲೇ ಬಂಜರಾಗಿ ವ್ಯವಸಾಯಕ್ಕೆ ಅಸಮರ್ಥವಾಗಿದೆ. ಪ್ರಸ್ತುತ ಮಣ್ಣಿನ ಅವನತಿ ದರದಲ್ಲಿ, ಭೂಮಿಯ ಶೇ.90ರಷ್ಟು ಭಾಗವು, 2050ರ ಹೊತ್ತಿಗೆ ಮರುಭೂಮಿಯಾಗಿ ಬದಲಾಗಬಹುದು ಎಂದು ವಿಶ್ವಸಂಸ್ಥೆಯು ಎಚ್ಚರಿಸಿದೆ. ಇದು ಇನ್ನು ಕೇವಲ ಮೂರು ದಶಕಗಳಿಗಿಂತ ಕಡಿಮೆ. ಈ ಅನಾಹುತವನ್ನು ತಪ್ಪಿಸಲು, ಸದ್ಗುರುಗಳು ಈ ವರ್ಷದ ಮಾರ್ಚ್‌ನಲ್ಲಿ ಮಣ್ಣು ಉಳಿಸಿ ಅಭಿಯಾನವನ್ನು ಪ್ರಾರಂಭಿಸಿದ್ದು, 26 ವಿದೇಶಗಳಲ್ಲಿ ಸಂಚರಿಸಿ ಅಲ್ಲಿನ ನಾಯಕರು, ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ನಾಗರಿಕರನ್ನು ಭೇಟಿ ಮಾಡಿ ಮಣ್ಣು ಉಳಿಸಲು ಬೆಂಬಲವನ್ನು ಪಡೆದರು.
ಮಣ್ಣು ಉಳಿಸಿ ಅಭಿಯಾನವು ಯುಎನ್ ಸಿಸಿಡಿ, ದಿ ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ(ಯುಎನ್‌ಇಪಿ), ವಿಶ್ವ ಆಹಾರ ಕಾರ್ಯಕ್ರಮ, ಮತ್ತು ಅಂತರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಬೆಂಬಲವನ್ನು ಪಡೆದುಕೊಂಡಿದೆ.