ಮುಳ್ಳೇರಿಯ: ಮಕ್ಕಳಿಗೆ ಮಾವಿನ ಬೀಜಗಳನ್ನು ಸಂಗ್ರಹಿಸುವುದು ಮಾವಿನ ಹಣ್ಣುಗಳ ಸೇವನೆಗಿಂತಲೂ ಹೆಚ್ಚು ಆಕರ್ಷಕವಾಗಿದೆ. ಪಿಲಿಕ್ಕೋಡ್ ಉತ್ತರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಲಕ್ಷ ಮಾವಿನ ಬೀಜ ಸಂಗ್ರಹ ಅಭಿಯಾನಕ್ಕೆ ತುಂಬುಹೃದಯದ ಬೆಂಬಲ ಸೂಚಿಸಿದವರು ಕುಟ್ಟಮತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು. ಇಲ್ಲಿಯ ಪ್ರತಿಯೊಬ್ಬ ವಿದ್ಯಾರ್ಥಿಗಳೂ ಇದೀಗ ಮಾವಿನ ಬೀಜ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಈಗಾಗಲೇ 5000 ಬೀಜಗಳನ್ನು ಸಂಗ್ರಹಿಸಲಾಗಿದೆ. ಎರಡು ಲಕ್ಷ ಮಾವಿನ ಬೀಜ ಸಂಗ್ರಹಿಸುವ ಸಂಶೋಧನಾ ಕೇಂದ್ರದ ಗುರಿಗೆಜಿಲ್ಲಿಯ ವಿದ್ಯಾರ್ಥಿಗಳು ಪೂರ್ಣ ಬೆಂಬಲ ನೀಡುತ್ತಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಜಯಚಂದನ್, ಪರಿಸರ ಕ್ಲಬ್‍ನ ಸಂಯೋಜಕ ಎಂ.ಮೋಹನನ್ ಮತ್ತು ಕೆ.ಕೃಷ್ಣನ್ ಅವರು ಬೀಜಗಳ ಸಂಗ್ರಹದ ನೇತೃತ್ವ ವಹಿಸಿದ್ದಾರೆ. ಸಂಗ್ರಹಿಸಿದ ಬೀಜಗಳನ್ನು ವಿದ್ಯಾರ್ಥಿಗಳಾದ ರಿಜುಲ್ ರಿಜೋ, ರಿಜಿಲಾ ರಿಜೋ ಮತ್ತು ಟಿ ಕೃಷ್ಣೇಂದು ಅವರಿಂದ ಉತ್ತರ ವಲಯ ಕೃಷಿ ಸಂಶೋಧನಾ ಕೇಂದ್ರದ ಫಾರ್ಮ್ ಅಧೀಕ್ಷಕ ಪಿ.ಎಸ್. ವಿ ಸುರೇಂದ್ರನ್ ಸ್ವೀಕರಿಸಿದರು. ಚೆರ್ವತ್ತೂರು ಪಂಚಾಯತಿ ಅಧ್ಯಕ್ಷೆ ಪಿ.ವಿ.ಪ್ರಮೀಳಾ, ವಾರ್ಡ್ ಸದಸ್ಯ ರಾಜೇಂದ್ರನ್ ಪಯ್ಯಡಕ್ಕಾತ್, ಪಿಟಿಎ ಅಧ್ಯಕ್ಷ ಎಂ.ರಾಜನ್ ಮೊದಲಾದವರು ಉಪಸ್ಥಿತರಿದ್ದರು.