ನವದೆಹಲಿ: ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಮತ್ತು ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ ಸತ್ಯ ತಪಾಸಣೆ ವೆಬ್‌ಸೈಟ್ ಆಲ್ಟ್ ನ್ಯೂಸ್ ಸಂಸ್ಥಾಪಕರಲ್ಲಿ ಒಬ್ಬರಾದ ಪತ್ರಕರ್ತ ಮೊಹಮ್ಮದ್ ಜುಬೈರ್ ಅವರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ, ಮೊಹಮ್ಮದ್ ಜುಬೇರ್ ಅವರನ್ನು ಬೇರೆ ಪ್ರಕರಣದಲ್ಲಿ ವಿಚಾರಣೆಗಾಗಿ ದೆಹಲಿಗೆ ಕರೆಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಕಡ್ಡಾಯ ಸೂಚನೆಯನ್ನೂ ನೀಡಿಲ್ಲ ಎಂದು ಸಿನ್ಹಾ ಆರೋಪಿಸಿದ್ದಾರೆ. ಪದೇ ಪದೇ ಮನವಿ ಮಾಡಿದರೂ ಎಫ್‌ಐಆರ್ ಪ್ರತಿಯನ್ನು ನೀಡುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಆದಾಗ್ಯೂ, ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಮೊಹಮ್ಮದ್ ಜುಬೇರ್ ಅವರನ್ನು ತನಿಖೆ ನಡೆಸಲಾಗ್ತಿದೆ. ದಾಖಲೆಯಲ್ಲಿ ಸಾಕಷ್ಟು ಪುರಾವೆಗಳನ್ನು ಹೊಂದಿದ ನಂತರ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ಕಸ್ಟಡಿಗೆ ಪಡೆಯಲು ಪೊಲೀಸರು ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು, ಜುಬೈರ್ ಬಂಧನ “ಸತ್ಯದ ಮೇಲಿನ ಹಲ್ಲೆ” ಎಂದು ಬಣ್ಣಿಸಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.