ನವದೆಹಲಿ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವಂತೆಯೇ, ಡಾಲರ್ ಎದುರು ಇತರ ಜಾಗತಿಕ ಕರೆನ್ಸಿಗಳಿಗಿಂತ ರೂಪಾಯಿ ಮೌಲ್ಯ ತುಲನಾತ್ಮಕವಾಗಿ ಉತ್ತಮವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧ, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಜಾಗತಿಕ ಕಚ್ಚಾ ಬೆಲೆಗಳು ಹೆಚ್ಚಳ, ನಿರಂತರ ಹಣದುಬ್ಬರ ಮತ್ತು ವಿಶ್ವಾದ್ಯಂತ ಕೇಂದ್ರ ಬ್ಯಾಂಕ್‌ಗಳು ಹಣದುಬ್ಬರವನ್ನು ಕಡಿಮೆ ಮಾಡಲು ವಿತ್ತೀಯ ನೀತಿ ವಿಧಾನ ಅಳವಡಿಸಿಕೊಂಡ ಹಿನ್ನೆಲೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿವೆ.
'ನಾವು ತುಲನಾತ್ಮಕವಾಗಿ ಉತ್ತಮವಾಗಿದ್ದೇವೆ. ನಾವು ಮುಚ್ಚಿದ ಆರ್ಥಿಕತೆ ಹೊಂದಿಲ್ಲ. ಜಾಗತಿಕವಾಗಿ ನಾವು ಭಾಗವಾಗಿದ್ದೇವೆ. ಆದ್ದರಿಂದ ಜಾಗತಿಕ ಅಭಿವೃದ್ಧಿಗಳಿಂದ ನಾವು ಪ್ರಭಾವಿತರಾಗಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬುಧವಾರ ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತೀ ಡಾಲರ್ ಎದುರು ಇದೇ ಮೊದಲ ಬಾರಿಗೆ 79 ರೂ. ಗಳಿಗಿಂತ ಕೆಳಗೆ ಕುಸಿದಿದೆ. ಈ ಕುರಿತ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಹೀಗೆ ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ, ಇಂದು ಬೆಳಗ್ಗೆ ಯುಎಸ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 13 ಪೈಸೆ ಏರಿಕೆಯಾಗಿ 78.90 ಕ್ಕೆ ತಲುಪಿದೆ.