ಕಾಸರಗೋಡು: ಕೇಂದ್ರ ಸರ್ಕಾರ ಘೋಷಿಸಿರುವ ಅಲ್ಪಾವಧಿ ಸೇನಾ ನೇಮಕ ಯೋಜನೆ ಅಗ್ನಿಪಥ್ ಯುವಕರಿಗೆ ಹಲವು ಅವಕಾಶಗಳನ್ನು ತೆರೆದುಕೊಟ್ಟಿದ್ದು, ನಾಲ್ಕು ವರ್ಷಗಳ ಸೇವಾವಧಿಯಲ್ಲಿ ದೇಶಭಕ್ತಿ ಮೂಡಿಸಲು ಸಹಕಾರಿಯಾಗಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಹೇಳಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ದೇಶಗಳು ಸಹ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸಿವೆ. ಅವರು ಅಗ್ನಿಪಥವನ್ನು ಏಕೆ ವಿರೋಧಿಸುತ್ತಾರೆ ಎಂಬುದನ್ನು ವಿವರಿಸಲು ವಿಮರ್ಶಕರಿಗೆ ಸಾಧ್ಯವಾಗುತ್ತಿಲ್ಲ. ಬೀದಿ ಗಲಭೆ ಹುಟ್ಟುಹಾಕುವ ಮೂಲಕ ಒಂದು ವರ್ಗದ ಜನರು ಭಯೋತ್ಪಾದನೆ ಮತ್ತು ರಾಜಕೀಯ ಶೋಷಣೆಯ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವುದಾಗಿ ದೂರಿದರು.
ಬಿಜೆಪಿ ರಾಜ್ಯ ಮತ್ತು ಜಿಲ್ಲಾ ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಚಿನ್ನದ ಕಳ್ಳಸಾಗಣೆ ಆರೋಪ ಎದುರಿಸುತ್ತಿರುವ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಸಭೆಯಲ್ಲಿಪ್ರತಿಭಟನೆ ಹಾಗೂ ಸಂಘಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.ಸಭೆಯಲ್ಲಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಲ್ಲದೆ 100ಕ್ಕೂ ಹೆಚ್ಚು ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಅಡ್ವ. ಪ್ರಕಾಶಬಾಬು, ರಾಜ್ಯ ಕೋಶದ ಸಂಯೋಜಕ ಅಶೋಕನ್ ಕುಳನಾಡ್ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಸ್ವಾಗತಿಸಿದರು. ವೇಲಾಯುಧನ್ ವಂದಿಸಿದರು.